ಯಲ್ಲಾಪುರ: ಗಣೇಶೋತ್ಸವದಲ್ಲಿ ಶಾಂತಿಗೆ ಮಹತ್ವ ನೀಡಬೇಕು. ಯಾವುದೇ ಭಿನ್ನಾಭಿಪ್ರಾಯ ಮಾಡಿಕೊಳ್ಳದೇ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಹೇಳಿದರು.
ಅವರು ಪಟ್ಟಣದ ಅಡಿಕೆ ಭವನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಗಣೇಶೋತ್ಸವದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಒಟ್ಟು 84 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದೆ. ಅಗತ್ಯವಿದ್ದಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಪಟ್ಟಣ ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯಿತಿ ನಿಗದಿಪಡಿಸಿದ ಸ್ಥಳದಲ್ಲೇ ವಿಸರ್ಜನೆ ಮಾಡಬೇಕು ಎಂದರು.
ಸಿಪಿಐ ಸುರೇಶ ಯಳ್ಳೂರ ಮಾತನಾಡಿ, ಭಕ್ತಿ, ಶ್ರದ್ಧೆ, ಒಗ್ಗಟ್ಟಿನಿಂದ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಮೆರವಣಿಗೆ ವೇಳೆ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಹಬ್ಬದ ಸಂದರ್ಭದಲ್ಲಿ ಬಂದೋಬಸ್ತ್ ಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲರ ಸಹಕಾರದೊಂದಿಗೆ ಸಂಭ್ರಮದಿಂದ ಹಬ್ಬ ಆಚರಿಸೋಣ ಎಂದರು.
ಅಗ್ನಿಶಾಮಕ ದಳದ ಅಧಿಕಾರಿ ಶಂಕರ ಅಂಗಡಿ, ತಾ.ಪಂ ವ್ಯವಸ್ಥಾಪಕ ರಾಮದಾಸ ನಾಯ್ಕ, ಲೋಕೋಪಯೋಗಿ ಇಲಾಖೆಯ ಇಂಜನಿಯರ್ ವಿಶಾಲ ಕಟಾವಕರ್, ಪ.ಪಂ ಆರೋಗ್ಯ ನಿರೀಕ್ಷಕ ಗುರು ಗಡಗಿ, ಹೆಸ್ಕಾಂ ಅಧಿಕಾರಿ ರಮಾಕಾಂತ ನಾಯ್ಕ, ಡಿ.ಆರ್.ಎಫ್.ಒ ಸಂಜಯಕುಮಾರ ಬೋರಗಲ್ಲಿ, ಪಿ.ಎಸ್.ಐ ಅಮೀನ್ ಸಾಬ ಅತ್ತಾರ ಇತರರಿದ್ದರು. ಪೊಲೀಸ್ ಇಲಾಖೆಯ ಸೀಮಾ ಗೌಡ ನಿರ್ವಹಿಸಿದರು. ತಾಲೂಕಿನ ವಿವಿಧ ಸಾರ್ವಜನಿಕ ಗಜಾನನೋತ್ಸವ ಸಮಿತಿಗಳ ಪ್ರಮುಖರು ಭಾಗವಹಿಸಿದ್ದರು.