ಅಂಕೋಲಾ: ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ, ಯುವತಿ ಗರ್ಭವತಿಯಾದ ಕೂಡಲೇ ಕೈಕೊಟ್ಟ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.
ಬೊಬ್ರುವಾಡದ ನಿವಾಸಿ, ಆಟೋ ಚಾಲಕ ಸಂಜಯ ನಾಯ್ಕ (24) ಬಂಧನಕ್ಕೊಳಗಾದ ಯುವಕನಾಗಿದ್ದಾನೆ. ಯುವತಿ ನೀಡಿದ ದೂರಿನಂತೆ ಪೊಲೀಸರು ಯುವಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಈತ ಕಳೆದ ಒಂದೂವರೆ ವರ್ಷದಿಂದ ಪರಿಶಿಷ್ಟ ಜಾತಿಯ ಯುವತಿಯೋರ್ವಳನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿದ್ದ.
ಯುವತಿಯು ಈತನ ಬಣ್ಣದ ಮಾತಿಗೆ ಮರುಳಾಗಿದ್ದು, ಯುವತಿ ಗರ್ಭವತಿಯಾದಾಗ ಯುವಕನನ್ನು ಮದುವೆಯಾಗಲು ಕೇಳಿಕೊಂಡಿದ್ದಾಳೆ. ಆದರೆ ಯುವಕ ಸಂಜಯ ಮದುವೆಯಾಗಲು ಒಪ್ಪದೆ ತಪ್ಪಿಸಿಕೊಳ್ಳತೊಡಗಿದ. ತನ್ನ ಹೆಸರು ಹೇಳಿದರೆ ಕೊಂದು ಬಿಡುವದಾಗಿ ಬೆದರಿಕೆಯನ್ನೂ ಹಾಕಿ ನಾಪತ್ತೆಯಾಗಿದ್ದ. ಹೀಗಾಗಿ ದಾರಿಕಾಣದೆ ಯುವತಿ ಪೊಲೀಸರ ಮೊರೆ ಹೋಗಿ ಯುವಕನ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.