ಶಿರಸಿ: ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಇಲ್ಲಿನ ಮಾರಿಕಾಂಬಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಸೋಮವಾರ ನಗರದ ಮಾರಿಕಾಂಬಾ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಒಂದು ಲಸಿಕೆಯ ಕಥೆ ನಾಟಕ ಪ್ರಥಮ ಸ್ಥಾನ ಪಡೆದುಕೊಂಡಿತು. ಕನ್ನಡ ಶಿಕ್ಷಕರಾದ ನಾರಾಯಣ ಭಾಗವತ್ ರಂಗ ಪಠ್ಯ, ನಿರ್ದೇಶನ ಒದಗಿಸಿದ್ದರೆ, ವಿಜ್ಞಾನ ಶಿಕ್ಷಕಿಯರಾದ ಜಯಲಕ್ಷ್ಮೀ ಗುನಗ ನಿರ್ವಹಣೆ ಮಾಡಿದ್ದರು. ಪ್ರತಿ ನಾಟಕಗಳೂ ತಲಾ ಎಂಟು ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. ಒಂದು ಲಸಿಕೆ ಕಥೆಯಲ್ಲಿ ವಿದ್ಯಾರ್ಥಿಗಳ ಹಿನ್ನಲೆ ಗಾಯನ, ವಾದ್ಯ ಪರಿಕರ ಹಾಗೂ ರಂಗ ಪರಿಕರಗಳನ್ನು, ಹಾಗೂ ಸಂಭಾಷಣೆಯನ್ನು ವಿಜ್ಞಾನ ವಸ್ತುವನ್ನು ತಲುಪಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.
ಆವೇಮರಿಯಾ ಪ್ರೌಢ ಶಾಲೆ ದ್ವಿತೀಯ, ಚಂದನ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು. ಒಟ್ಟೂ ಐದು ನಾಟಕ ತಂಡಗಳು ಪಾಲ್ಗೊಂಡಿದ್ದವು. ಪ್ರತಿ ನಾಟಕವೂ ಅರ್ಧ ಗಂಟೆ ಅವಧಿಯದ್ದಾಗಿತ್ತು.
ಬಿಇಓ ಎಂ.ಎಸ್.ಹೆಗಡೆ ನಾಟಕ ಸ್ಪರ್ಧೆಗೆ ಚಾಲನೆ ನೀಡಿ ಶುಭಕೋರಿದ್ದರು. ಈ ವೇಳೆ ನಿರ್ಣಾಯಕರಾದ ದೀಪಾ ಪಟಗಾರ, ಚಂದ್ರು ಉಡುಪಿ, ಕಾರ್ಯಕ್ರಮ ಸಂಯೋಜಕರಾದ ಪ್ರಸನ್ನ ಹೆಗಡೆ ಇತರರು ಇದ್ದರು.