• Slide
  Slide
  Slide
  previous arrow
  next arrow
 • ಚೌತಿಯ ಪಂಚಖಾದ್ಯಗಳು ನಮ್ಮ ಸಂಸ್ಕೃತಿ, ಪರಂಪರೆಯ ದ್ಯೋತಕ: ನೀರ್ನಳ್ಳಿ ರಾಮಕೃಷ್ಣ

  300x250 AD

  ಶಿರಸಿ: ಒಂದೆಡೆ ಬಟ್ಟಲಿನಲ್ಲಿ ಅಕ್ಕಿ ಹಿಟ್ಟಿನಿಂದ ಗಣಪತಿ ಆಕೃತಿಯಲ್ಲಿ ಚಕ್ಕುಲಿಗಳು, 75ನೇ ಸ್ವಾತಂತ್ರ‍್ಯ ಅಮೃತಮಹೋತ್ಸವ ಬಿಂಬಿಸುವ ಗಣಪತಿ ಮೂರ್ತಿಗಳು ಅರಳಿದ್ದವು.ಮತ್ತೊಂದೆಡೆ ಎಣ್ಣೆ ಬಂಡಿಯಲ್ಲಿ ಕೈ ಚಕ್ಕುಲಿ ಸೇರಿದಂತೆ ಚೌತಿ ಖಾದ್ಯಗಳು ಕರಿಯಲಾಗುತ್ತಿತ್ತು. ಇವೆಲ್ಲ ಮಲೆನಾಡಿನ ಚೌತಿ ವಿಶೇಷತೆ, ಖಾದ್ಯಗಳ ಘಮಘಮ ಪರಿಮಳ ಹೊರಸೂಸಿದವು, ಬಾಯಲ್ಲಿ ನೀರೂರಿಸಿದವು.
  ಇಂಥದ್ದೊಂದು ವಿಭಿನ್ನ ಕಾರ್ಯಕ್ರಮ ನಗರದ ಎಪಿಎಂಸಿ ಆವಾರದಲ್ಲಿರುವ ಉತ್ತರ ಕನ್ನಡ ಸಾವಯವ ಒಕ್ಕೂಟ ಕಚೇರಿಯಲ್ಲಿ ಏರ್ಪಾಟಾಗಿತ್ತು. ಈ ಮೂಲಕ ಮಲೆನಾಡಿನ ಸಾಂಪ್ರದಾಯಿಕ ಖಾದ್ಯಗಳನ್ನು ಹೊರಪ್ರಪಂಚಕ್ಕೆ ಪರಿಚಯಿಸುವ ಹಾಗೂ ಗ್ರಾಮೀಣ ಭಾಗದ ಮಹಿಳೆಯರನ್ನು ಇಂಥ ಖಾದ್ಯ ತಯಾರಿಕೆ ಇನ್ನಷ್ಟು ಉತ್ತೇಜಿಸುವ ಕಾರ್ಯ ಮಾಡಲಾಯಿತು.
  ಚಕ್ಕುಲಿ ಸ್ಪರ್ಧೆಯ ಅಂಗವಾಗಿ 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಕೆಸರಿ, ಬಿಳಿ, ಹಸಿರು ಆಕೃತಿಯಲ್ಲಿ ಅಕ್ಕಿ ಹಿಟ್ಟಿನಿಂದ ಗಣಪತಿ ಮೂರ್ತಿ ತಯಾರಿಸಲಾಗಿತ್ತು. ಅಕ್ಕಿ ಹಿಟ್ಟಿನ ಎಳೆಗಳ ಮೂಲಕ ಗಣಪತಿ ಆಕೃತಿಯಲ್ಲಿ ಚಕ್ಕುಲಿಯನ್ನು ಮಹಿಳಾ ಸ್ಪರ್ಧಾಳುಗಳು ತಯಾರಿಸಿದ್ದು ಗಮನಸೆಳೆಯಿತು. ಸುಮಾರು ೨೦ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
  ಇನ್ನು ಕೈಚಕ್ಕಲಿ, ಸುತ್ತು ಚಕ್ಕುಲಿಗಳನ್ನು ಕಂಬಳದಲ್ಲೇ ಕರಿದು ಪ್ಯಾಕ್ ಮಾಡಿ ಪ್ರದರ್ಶನ ಹಾಗೂ ಮಾರಾಟ ಮಾಡಲಾಯಿತು.

  ಪಂಚಖಾದ್ಯ ಕಿಟ್ ಬಿಡುಗಡೆ: ಉತ್ತರ ಕನ್ನಡ ಸಾವಯವ ಒಕ್ಕೂಟವು ಚಕ್ಕುಲಿ, ಅತ್ರಾಸ, ಕರ್ಜಿಕಾಯಿ, ಮೋದಕ, ಲಡ್ಡಿಗೆ ಉಂಡೆ ಹೀಗೆ ಪಂಚಖಾದ್ಯ ಒಳಗೊಂಡ ಕಿಟ್ ರೂಪಿಸಿದ್ದು ಅದನ್ನು ಹೆಸರಾಂತ ಚಿತ್ರನಟ ನೀರ್ನಳ್ಳಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಪಂಚಖಾದ್ಯಗಳು ನಮ್ಮ ಸಂಸ್ಕೃತಿ, ಪರಂಪರೆಯ ದ್ಯೋತಕ. ಚಕ್ಕುಲಿ ಕಂಬಳ ಎಂದರೆ ಹಿಂದೆಲ್ಲಾ ಅದೊಂದು ಹಬ್ಬವಾಗಿತ್ತು. ಮಹಿಳೆಯರೆಲ್ಲ ಒಟ್ಟಾಗಿ ಖಾದ್ಯ ತಯಾರಿಕೆ ಮಾಡುತ್ತಿದ್ದರು. ಆದರೆ ಈಗ ಚಕ್ಕುಲಿ ಕಂಬಳ ಮುಗ್ಗರಿಸಿದೆ. ಅದನ್ನು ಮತ್ತೆ ಮುನ್ನೆಲೆಗೆ ತರಬೇಕಿದೆ. ಅದು ನಮ್ಮನ್ನು ಒಟ್ಟುಗೂಡಿಸುವ ಶಕ್ತಿ, ಸಾಮರ್ಥ್ಯ ಹೊಂದಿದೆ ಎಂದರು.
  ಸಾರ್ವಜನಿಕರು ಆರೋಗ್ಯ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ. ಹೀಗಿರುವಾಗ ಮಲೆನಾಡಿನ ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಖಾದ್ಯಗಳು ಗುಣಮಟ್ಟತೆಯಿಂದ ಕೂಡಿರುತ್ತದೆ. ವ್ಯವಹಾರಿಕವಾಗಿ ಇದನ್ನು ಮಾಡುವುದರಿಂದ ಮಹಿಳೆಯರಿಗೂ ಇದು ಹೊಸ ದಾರಿ ಎಂದರು.
  ಉತ್ತರ ಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಕೋಟೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಒತ್ತಡದ ಕಾರಣದಿಂದ ಮನೆಗಳಲ್ಲಿ ಸಾಂಪ್ರದಾಯಿಕ ಖಾದ್ಯಗಳನ್ನು ಮಾಡಲು ಆಗುತ್ತಿಲ್ಲ. ಇದಕ್ಕಾಗಿ ಕಿಟ್ ರೂಪದಲ್ಲಿ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಈ ಮೂಲಕ ಹೊರಭಗದಲ್ಲಿ ಮಲೆನಾಡಿನ ಖಾದ್ಯ ಪರಿಚಯಿಸುತ್ತಿದ್ದೇವೆ ಎಂದರು.
  ಈಗಾಗಲೇ ಹಲಸು, ಬಾಳೆ ಹೀಗೆ ಮಲೆನಾಡಿನ ೫೦ಕ್ಕೂ ಹೆಚ್ಚು ಉಪಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡುತ್ತಿದ್ದೇವೆ. ಸಂಸ್ಥೆ ಹೀಗೆ 5 ಕೋಟಿ ರೂ.ಗೃಹ ಉತ್ಪನ್ನಗಳ ವ್ಯವಹಾರ ಮಾಡಿದೆ. ಈ ಮೂಲಕ ಮನೆಯಲ್ಲಿ ಉತ್ಪನ್ನ ತಯಾರಿಸುವವರಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
  ಕೃಷಿ ಸಹಾಯಕ ಉಪನಿರ್ದೇಶಕ ನಟರಾಜ ಮಾತನಾಡಿ, ಉತ್ತರ ಕನ್ನಡ ಸಾವಯವ ಒಕ್ಕೂಟ ಕಳೆದ ಆರೇಳು ವರ್ಷಗಳಿಂದ ವಿಭಿನ್ನ ಕಾರ್ಯಕ್ರಮ ಮಾಡುತ್ತಿದೆ ಎಂದು ಶ್ಲಾಘಿಸಿದರು.
  ಕೃಷಿ ಇಲಾಖೆಯಲ್ಲಿ ಉತ್ಪನ್ನಗಳ ಸಂಸ್ಕರಣೆಗೆ ಸಬ್ಸಿಡಿ ಲಭ್ಯವಿದೆ. ಜಿಲ್ಲೆಯಲ್ಲಿ 15 ರೈತ ಉತ್ಪಾದಕ ಸಂಘ ಮಾಡಿದ್ದೇವೆ. ರೈತರನ್ನೇ ರಪ್ತುದಾರರನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ ಎಂದರು.
  ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶ್ರೀಪಾದ ರಾಯಸದ್, ಒಕ್ಕೂಟದ ನಿರ್ದೇಶಕರಾದ ಗುರುಪಾದ ಹೆಗಡೆ ಬೊಮ್ಮನಳ್ಳಿ, ನಾರಾಯಣ ಹೆಗಡೆ ಗಡಿಕೈ, ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಮುಂತಾದವರು ಪಾಲ್ಗೊಂಡರು.
  ನಿರ್ದೇಶಕ ರಾಘವ ಹೆಗಡೆ ಸ್ವಾಗತಿಸಿದರು. ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಕಾಸ ಹೆಗಡೆ ನಿರೂಪಿಸಿದರು. ಕೆ.ವಿ.ಗಣೇಶ, ಅಜಯ ಭಟ್ಟ, ಕಾವ್ಯಾ ಹೆಗಡೆ, ಮಂಜುನಾಥ ಹೆಗಡೆ ವಿವಿಧ ಜವಾಬ್ದಾರಿ ನಿರ್ವಹಿಸಿದರು.

  300x250 AD

  ಕೋಟ್
  ಚೌತಿಯ ಪಂಚಖಾದ್ಯಗಳು ನಮ್ಮ ಸಂಸ್ಕೃತಿ, ಪರಂಪರೆಯ ದ್ಯೋತಕ. ಅದು ಮಲೆನಾಡಿನ ಗುರುತು.
  =ನೀರ್ನಳ್ಳಿ ರಾಮಕೃಷ್ಣ, ಹೆಸರಾಂತ ಚಿತ್ರನಟ

  Share This
  300x250 AD
  300x250 AD
  300x250 AD
  Leaderboard Ad
  Back to top