ಶಿರಸಿ: ವಿದೇಶದಿಂದ ಆಮದಾಗುತ್ತಿರುವ ಅಡಿಕೆಗೆ ನಿರ್ಬಂಧ ಹೇರಬೇಕು ಮತ್ತು ಅಡಿಕೆಯ ಕನಿಷ್ಟ ಆಮದು ಶುಲ್ಕವನ್ನು ಪ್ರತಿ ಕೆ.ಜಿ.ಗೆ ಈಗಿರುವ ದರ ರೂ.251 ರಿಂದ ರೂ.360 ಕ್ಕೆೆ ಹೆಚ್ಚಿಸಿ ನಿಗದಿಪಡಿಸಬೇಕೆಂದು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ ಹಾಗೂ ಅಡಿಕೆ ಮಾರಾಟ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳ ನಿಯೋಗವು ರಾಜ್ಯ ಗೃಹ ಸಚಿವ ಹಾಗೂ ಅಡಿಕೆ ಕಾರ್ಯಪಡೆಯ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಹ ಭೇಟಿ ಮಾಡಿ ಅಡಿಕೆಗೆ ಸಂಬಂಧಿಸಿ ತಾಂತ್ರಿಕ ಸಮಿತಿ ರಚಿಸುವಂತೆ ಮನವಿ ಮಾಡಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರನ್ನು ನಿಯೋಗ ಭೇಟಿ ಮಾಡಿ ಸೆಂಟೆಡ್ ಸುಪಾರಿ ಮೇಲಿರುವ ಶೇ.18 ಜಿ.ಎಸ್.ಟಿ. ಅನ್ನು ಕಡಿಮೆ ಮಾಡುವಂತೆ ಹಾಗೂ ವಿದೇಶದಿಂದ ಬರುವ ಅಡಿಕೆಗೆ ನಿಯಂತ್ರಣ ಹೇರಲು ಒತ್ತಾಯಿಸಿದೆ.
ಕೇಂದ್ರ ಹಾಗೂ ರಾಜ್ಯ ಸಚಿವರು ನಿಯೋಗದ ಮನವಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆಂದು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಮಾಮ್‌ಕೋಸ್ ನಿರ್ದೇಶಕ ವೈ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.
ನಿಯೋಗದಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಸಹಕಾರ ಮಂಡಳ (ಕ್ಯಾಸ್ಕೋ) ಅಧ್ಯಕ್ಷರಾದ ಹೆಚ್.ಎಸ್.ಮಂಜಪ್ಪ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡಗಿ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್, ರಾಜ್ಯ ಅಡಿಕೆ ಮಹಾ ಮಂಡಳದ ಉಪಾಧ್ಯಕ್ಷ ಮತ್ತು ಶಿರಸಿ ಟಿ.ಎಸ್.ಎಸ್, ನಿರ್ದೇಶಕ ಶಶಾಂಕ ಹೆಗಡೆ ಶೀಗೇಹಳ್ಳಿ, ಅಡಿಕೆ ಮಹಾಮಂಡಳದ ನಿರ್ದೇಶಕ ಮತ್ತು ತುಮ್‌ಕೋಸ್ ನಿರ್ದೇಶಕ ಹೆಚ್.ಎಸ್.ಶಿವಕುಮಾರ್, ಚನ್ನಗಿರಿ ತುಮ್‌ಕೋಸ್ ಅಧ್ಯಕ್ಷ ಆರ್.ಎಂ.ರವಿ ಹಾಗೂ ಹಿರಿಯ ಸಹಕಾರಿ ರಮೇಶ ವೈದ್ಯ ಇದ್ದರು.