ಹೊನ್ನಾವರ: ಮಡಿಕೇರಿಯಲ್ಲಿ ನೆರೆಹಾನಿ ಪರಿಶೀಲನೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ನಡೆದ ಮೊಟ್ಟೆ ದಾಳಿಯನ್ನು ಖಂಡಿಸಿ ತಾಲೂಕಿನ ಅರೇಅಂಗಡಿ ಸರ್ಕಲ್ ಬಳಿ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ವೇಳೆ ಬಿಜೆಪಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಬಿಜೆಪಿ ಸರ್ಕಾರ ವಜಾ ಮಾಡುವ ಜೊತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಮಾತನಾಡಿ, ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರೀಕ್ಷಾ ನೇಮಕಾತಿ, ವಿವಿಧ ಕಾಮಗಾರಿಯಲ್ಲಿ ಭೃಷ್ಟಾಚಾರದ ಕೂಪವಾಗಿ 40% ಕಮೀಷನ್ ಜಗಜ್ಜಾಹೀರಾಗಿದೆ. ಬಿಜೆಪಿ ಕಾರ್ಯಕರ್ತರು ಮಾನಸಿಕ ಸ್ಥಿಮಿತ ಕಳೆದುಕೊಂಡು ವಿಕೃತ ಮನಸ್ಥಿತಿಯಿಂದ ಇಂತಹ ವರ್ತನೆಗೆ ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರದಿಂದ ರಕ್ಷಣೆ ನೀಡಲು ಸಾಧ್ಯವಾಗಿಲ್ಲ ಎಂದರೆ, ಸಾಮಾನ್ಯ ಜನರಿಗೆ ರಕ್ಷಣೆ ನೀಡಲು ಸಾಧ್ಯವೇ? ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಮತ್ತೊಮ್ಮೆ ಸಾಕ್ಷಿಯಾಗಿದೆ. ಬಿಜೆಪಿಯವರು ಸುಳ್ಳು ಹೇಳುವುದು ಬಿಟ್ಟು ಬೇರೇನು ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಆಯೋಜಿಸಿದ್ದ ಸಿದ್ದರಾಮೋತ್ಸವ, ಸ್ವಾತಂತ್ರ್ಯೋತ್ಸವ ಜಾಥಾ ಕಾರ್ಯಕ್ರಮದ ಬಳಿಕ ಬಿಜೆಪಿಗರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಕಳೆದ ಬಾರಿ ಪರೇಶ ಮೇಸ್ತ ಪ್ರಕರಣದ ಬಳಿಕ ಚುನಾವಣೆಯಲ್ಲಿ ಅಧಿಕಾರ ಹಿಡಿದ ಡಬಲ್ ಇಂಜಿನ್ ಸರ್ಕಾರ ನ್ಯಾಯ ನೀಡಿಲ್ಲ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ತಾಲೂಕ ಅಧ್ಯಕ್ಷ ಸಂದೇಶ ಶೆಟ್ಟಿ ಮಾತನಾಡಿ, ಬಿಜೆಪಿ ಯುವ ಕಾರ್ಯಕರ್ತರು ವಿಕೃತ ಮನಸ್ಥಿತಿಗೆ ಹೋಗಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸೋಲುವ ಭೀತಿಯಿಂದ ಇಂತಹ ಹೀನ ಕೃತ್ಯಕ್ಕೆ ಮುಂದಾಗಿದ್ದಾರೆ. ಯುವಕರು ಸತ್ಯಾಸತ್ಯತೆ ಅರಿತಿದ್ದು, ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀನಾಥ ಶೆಟ್ಟಿ, ಮಹೇಶ ನಾಯ್ಕ, ಮೋಹನ ಆಚಾರಿ, ಶ್ರೀಕಾಂತ ನಾಯ್ಕ, ಪ್ರಸಾದ ನಾಯ್ಕ, ಪ್ರವೀಣ ನಾಯ್ಕ, ಸಚಿನ ನಾಯ್ಕ, ಮನೋಜ ನಾಯ್ಕ, ನಿರಂಜನ ನಾಯ್ಕ, ಯುವಕಾಂಗ್ರೆಸ್ ಸದಸ್ಯರು ಹಾಜರಿದ್ದರು.