ಸಿದ್ದಾಪುರ: ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ನಡೆಸುತ್ತಿರುವ ನಾಗರಾಜ ನಾಯ್ಕ ವೃದ್ಧ ವ್ಯಕ್ತಿಗೆ ರಕ್ಷಣೆಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.ದಾಂಡೆಲಿಯ ಬಸ್ ನಿಲ್ದಾಣದಲ್ಲಿ ಕಾಲು ಕೊಳೆತು ಹುಳಗಳಾಗಿ ದುರ್ವಾಸನೆಯಿಂದ ನರಳಾಡುತ್ತಿದ್ದ ವೃದ್ಧ ವ್ಯಕ್ತಿಗೆ ರಕ್ಷಣೆ ನೀಡಿ ಆಶ್ರಮಕ್ಕೆ ಕರೆತಂದು ಉಪಚಾರ ಮಾಡಿದ್ದಾರೆ.
ದಾಂಡೇಲಿ ನಗರದ ಬಸ್ ನಿಲ್ದಾಣದಲ್ಲಿದ್ದುಕೊಂಡು ಹಲವಾರು ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ ರಾಮ ಎನ್ನುವ ವೃದ್ಧ ವ್ಯಕ್ತಿಯೊಬ್ಬರು ಕಾಲಿಗೆ ಗಾಯವಾಗಿ ಬಿದ್ದುಕೊಂಡವರನ್ನು. ಅನಾಥಾಶ್ರಮಕ್ಕೆ ಸೇರಿಸಿಕೊಳ್ಳುವ ಬಗ್ಗೆ ದಾಂಡೇಲಿಯ ನಗರ ಠಾಣೆಯ ಪಿಎಸೈರವರು ನಾಗರಾಜ ನಾಯ್ಕರಲ್ಲಿ ಕೋರಿಕೊಂಡಿದ್ದರಿಂದ ದಾಂಡೇಲಿಗೆ ಹೋಗಿ ಈ ವೃದ್ಧ ವ್ಯಕ್ತಿಯನ್ನು ಪೋಲಿಸರ ಸಹಕಾರದಿಂದ ಸಿದ್ದಾಪುರಕ್ಕೆ ಕರೆದುಕೊಂಡು ಬಂದಿದ್ದಾರೆ. ಆಶ್ರಮಕ್ಕೆ ಕರೆತಂದು ಆತನ ಕಾಲಿನ ಬ್ಯಾಂಡೇಜ್ ಬಿಚ್ಚಿದಾಗ ಹಿಮ್ಮಡಿ ಬಾಗ ಪೂರಾ ಕೊಳೆತು ಹೋಗಿದ್ದು ಹುಳಗಳು ಮಾಂಸವನ್ನು ತಿಂದು ಎಲುಬು ಕಾಣಿಸುತ್ತಿದ್ದವು. ನಾಗರಾಜ ನಾಯ್ಕರು ಗಾಯವನ್ನು ಶುಚಿಗೊಳಿಸಿ ಹುಳಗಳನ್ನು ತೆಗೆದು, ಕಟಿಂಗ್- ಶೇವಿಂಗ್ ಮಾಡಿ, ಸ್ನಾನ ಮಾಡಿಸಿ ತಾಲೂಕಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈತನ ರಕ್ಷಣೆಯಲ್ಲಿ ಸಹಕರಿಸಿದ ದಾಂಡೇಲಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳಿಗೂ, ಸಿಬ್ಬಂದಿಗಳಿಗೂ, ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಹಳಿಯಾಳದ ಬಸವರಾಜ ಬೆಂಡಿಗೇರಿಮಠ ರವರಿಗೆ ದಲಿತ ಸಂಘಟನೆಯ ಪ್ರಮುಖರಾದ ಸಂಜಯ್ ಕಾಂಬ್ಳೆ ಯಲ್ಲಾಪುರದ ಪ್ರಕಾಶ್ ಕಟ್ಟಿಮನಿ ಹಾಗೂ ಧಿರಜ್ ತಿನೇಕರ್, ಸೇವಾ ಸಮಿತಿಯ ಮಮತಾ ನಾಯ್ಕ, ಹಾಗೂ ಸಿದ್ದಾಪುರದ ತಾಲೂಕಾ ಸರಕಾರಿ ಆಸ್ಪತ್ರೆಯ ವೈದ್ಯರಾದ ಲೋಕೇಶ್ ರವರಿಗೆ ಹಾಗೂ ಸಿಬ್ಬಂದಿಗಳಿಗೆ ಹ್ರದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಹಿಂದೆ ಕೂಡ ಹಲವಾರು ಜನ ಅನಾಥರು ರಸ್ತೆಯ ಮೇಲೆ ಕೈಕಾಲು ಕೊಳೆತು ಹುಳಗಳಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವರನ್ನು ನಾಗರಾಜ ನಾಯ್ಕರು ರಕ್ಷಣೆ ಮಾಡಿರುವುದನ್ನು ನಾವು ಈ ಸಂದರ್ಬದಲ್ಲಿ ನೆನಪು ಮಾಡಬಹುದು. ಮಾಂಸ ಕೊಳೆತು ವಾಸನೆ ಬರುತ್ತಿದ್ದರು ಲೆಕ್ಕಿಸದೆ ಈ ವೃದ್ಧ ವ್ಯಕ್ತಿಯ ರಕ್ಷಣೆ ಮಾಡಿರುವ ನಾಗರಾಜ ನಾಯ್ಕರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ವೃದ್ಧ ವ್ಯಕ್ತಿ ರಕ್ಷಣೆ ಮಾಡಿ ಆಶ್ರಯ ನೀಡಿದ ನಾಗರಾಜ್ ನಾಯ್ಕ್
