ಯಲ್ಲಾಪುರ: ಕಲೆಯ ಅಭಿವ್ಯಕ್ತಿ ಅಂತರಂಗದ ಅನುಭವವಾಗಬೇಕು. ಕಲಾವಿದನಲ್ಲಿ ಇರುವ ಹಾರ್ದಿಕತೆಯ ಭಾವ ಆತನ ಪಾತ್ರಗಳನ್ನು ಎತ್ತರಕ್ಕೆ ಏರಿಸಬಲ್ಲದು ಎಂದು ಹಿರಿಯ ಅರ್ಥಧಾರಿ ಅಶೋಕ ಭಟ್ ಉಜಿರೆ ಹೇಳಿದರು.
ಅವರು ತಾಲೂಕಿನ ವಜ್ರಳ್ಳಿಯ ಕಪ್ಪೆಮಠದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಕೃಷ್ಣಾಷ್ಟಮಿಯ ನಿಮಿತ್ತ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ಯಕ್ಷಗಾನ ಕಲೆ ಆರಾಧನೆಯ ಕಲೆಯಾಗಿದ್ದು ಪರಂಪರೆಯಿಂದ ಪೋಷಿಸಿಕೊಂಡು ಬಂದಿದೆ. ಶಾಶ್ವತವಾಗಿ ಜೀವಂತವಾಗಿರುವ ಜೀವನದ ಒಂದು ಭಾಗವೇ ಆಗಿರುವ ಯಕ್ಷಗಾನವು ಈ ಭಾಗದ ಶಕ್ತಿ ಚೈತನ್ಯವಾಗಿದೆ. ಇಂತಹ ಕಲಾರಾಧನೆ ಈ ನೆಲದಲ್ಲಿ ನಿರಂತರವಾಗಿ ನಡೆಯಲಿ ಎಂದರು.
ಶ್ರೀಕೃಷ್ಣ ಸಂಧಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ, ಮದ್ದಳೆಯಲ್ಲಿ ಶಂಕರ ಭಾಗ್ವತ ಯಲ್ಲಾಪುರ ಹಿಮ್ಮೇಳದಲ್ಲಿ ಭಾಗವಹಿಸಿದ್ದರು. ಅರ್ಥಧಾರಿಗಳಾಗಿ ಕೌರವನ ಪಾತ್ರದಲ್ಲಿ ಅಶೋಕ ಭಟ್ಟ ಉಜಿರೆ , ಕೃಷ್ಣನಾಗಿ ಹರೀಶ ಬಳಂತಿಮೊಗರು,ವಿದುರನಾಗಿ ಡಾ.ಡಿ.ಕೆ.ಗಾಂವ್ಕಾರ ಪಾತ್ರ ನಿರ್ವಹಿಸಿದರು.