ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅನುದಾನ ಪಡೆಯಲು ಇರುವ ಕೆಲವು ಅವೈಜ್ಞಾನಿಕ ಕ್ರಮಗಳನ್ನು ಕೈ ಬಿಡಿವಂತೆ ಕಲಾವಿದರ, ಕಲಾ ಸಂಘಟನೆಗಳ ಮನವಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಸ್ಪಂದನೆ ವ್ಯಕ್ತವಾಗಿದೆ.
ಶಿರಸಿ ಸಿದ್ದಾಪುರದ ಕ್ಷೇತ್ರದ ಕಲಾವಿದರ ಸಂಘಟನೆಗಳು ಮನವಿ ನೀಡಿ ಕಾಗೇರಿ ಅವರಲ್ಲಿ ಹಕ್ಕೊತ್ತಾಯ ಮಾಡಿದಾಗ ಧನಾತ್ಮಕವಾಗಿ ಸ್ಪಂದಿಸಿ ಕಲಾವಿದರ ಜೊತೆ ತಾವಿರುವದಾಗಿ ಭರವಸೆ ನೀಡಿದ್ದಾರೆ. ಕೋವಿಡೋತ್ತರ ಕಾಲಘಟ್ಟದಲ್ಲಿ ಚೇತರಿಸಿಕೊಳ್ಳುತ್ತಿದ್ದ ಕಲಾವಿದರ ಹಾಗೂ ಕಲಾ ಸಂಘಟನೆಗಳ ಸಂಕಷ್ಟಕ್ಕೆ ಸ್ಪಂದಿಸುಯವ ಬದಲು ಇನ್ನಷ್ಟು ನಿಯಮಗಳನ್ನು ಗೊಂದಲಯುಕ್ತವಾಗಿ ಹೇರಿ ಹೇಗೆ ಅರ್ಜಿ ಸಲ್ಲಿಸಬೇಕು ಎಂದೇ ತಿಳಿಯದಂತೆ ಆಗಿದೆ. ಇಲಾಖೆ ನೀಡುವ ಅನುದಾನ ಸಾಮಾನ್ಯ ಕಲಾವಿದರಿಗೆ, ಕಲಾ ಸಂಘಟನೆಗಳಿಗೆ ಕನ್ನಡಿಯೊಳಗಿನ ಗಂಟಾಗಿಸುತ್ತಿದೆ ಎಂದು ಮನವಿಯಲ್ಲಿ ಆತಂಕಿಸಲಾಗಿದೆ.
ದಿನಕ್ಕೊಂದು ದಾಖಲೆ ಕೇಳುತ್ತ, ಕಾಗದ ಮುಕ್ತ ವ್ಯವಸ್ಥೆ ಮಾಡಲು ಹೋಗಿ ಕಲಾವಿದರು ಮೂರು ನಾಲ್ಕು ವರ್ಷಗಳ ಕಡತ ಹಿಡಿದು ದೂರದ ಜಿಲ್ಲಾ ಕಚೇರಿಗೆ ಹೋಗಬೇಕಾಗಿದೆ. ಆನ್‌ಲೈನ್ ಅರ್ಜಿ ಹಾಕಿದ ಬಳಿಕವೂ ಸಲ್ಲಿಸಿದ ಅರ್ಜಿ ವಿವರ ಹಾಗೂ ದಾಖಲೆಗಳನ್ನು ಇಲಾಖೆ ಕೇಳಿ ಪಡೆಯುತ್ತಿದೆ. ಪ್ರಾಯೋಜಕತ್ವದ ಅನುದಾನ ಪಡೆಯಲು ಇಲಾಖೆಯ ಅಧಿಕಾರಿಗಳು ಕಡ್ಡಾಯ ಹಾಜರಾತಿ ಇರಬೇಕು ಎಂದೂ ಇಲಾಖೆ ಹೇಳಿದೆ. ಪ್ರಭಾರಿ ಹುದ್ದೆಯ, ಬೆರಳೆಣಿಕೆಯ ಸಿಬ್ಬಂದಿಗಳ ಕಾರವಾರ ಕೇಂದ್ರದಿಂದ ಸಿದ್ದಾಪುರದ ತುದಿಗೆ ನಡೆಯುವ ರಾತ್ರಿಯ ಯಕ್ಷಗಾನಕ್ಕೆ ಅಧಿಕಾರಿಗಳು ಬಾರದೇ ಇದ್ದರೆ ಅನುದಾನ ಬರುವ ಸಾಧ್ಯತೆ ಇಲ್ಲ ಎಂದೂ ಸಂಘಟನೆಗಳು ಹೇಳಿವೆ.
ವಿಕೇಂದ್ರೀಕರಣ ಹೋಗಿ ನಗರದಲ್ಲಿ ಮಾತ್ರ ಕಾರ್ಯಕ್ರಮ ಆಗುವಂತೆ ಆಗುತ್ತದೆ. ಯಾರೋ ಮಾಡಿದ ಕೆಲ ಸಂಸ್ಥೆಗಳ ತಪ್ಪಿಗೆ ಕ್ರಿಯಾಶೀಲ ಆಗಿರುವ ಸಂಘಟನೆಗಳಿಗೂ ಅವರ ನಿಯಮ ನುಂಗಾಲಾರದ ತುತ್ತಾಗಿದೆ ಎಂದಿವೆ.
ಕಳೆದ ಹತ್ತು ವರ್ಷಗಳಿಂದ ಅತ್ಯಂತ ದೊಡ್ಡ ಸಾಂಸ್ಕೃತಿಕ ಜಿಲ್ಲೆಯಾದ ಉತ್ತರ ಕನ್ನಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಭಾರಿ, ಅಧಿಕಾರಿ ಸಿಬ್ಬಂದಿಗಳೇ ಆಗಿದ್ದಾರೆ. ಮಾತೃ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳನ್ನೇ ನೇಮಿಸಬೇಕು ಎಂದೂ ಆಗ್ರಹಿಸಿ ಕೇಂದ್ರ ಕಚೇರಿ, ಜಿಲ್ಲಾ ಕಚೇರಿ ಅನುದಾನ ಪಡೆಯಲು ನಿಯಮ ಸಡಿಲಿಕೆ ಮಾಡಬೇಕು. ವೇಷ ಭೂಷಣಗಳಿಗೆ ಜಿಎಸ್ಟಿ ಬಿಲ್‌ಕೂಡ ಕೇಳಲಾಗಿದೆ. ಗ್ರಾಮೀಣ ಕಲಾವಿದರಲ್ಲಿ ಜಿಎಸ್ಟಿ ಬಿಲ್ ಇರದು ಎಂದೂ ಸಮಸ್ಯೆ ಹೇಳಿ ಕಳೆದ ವರ್ಷ ಇದ್ದ ನಿಯಮಾವಳಿ ಮುಂದುವರಿಸಬೇಕು ಎಂದೂ ಮನವಿ ಮಾಡಿಕೊಳ್ಳಲಾಗಿದೆ.
ಈ ವೇಳೆ ನಾಗರಾಜ್ ಜೋಶಿ, ಭಾಗವತ ಕೇಶವ ಹೆಗಡೆ ಕೊಳಗಿ, ಮಹಾಬಲೇಶ್ವರ ಭಟ್ಟ ಇಟಗಿ, ಸುಜಾತ ದಂಟಕಲ್, ವಿ. ದತ್ತಮೂರ್ತಿ ಭಟ್ಟ, ಅಶೋಕ ಭಟ್ಟ ಸಿದ್ದಾಪುರ, ಗಣಪತಿ ಹುಲಿಮನೆ, ಪ್ರಭಾಕರ ಹಣಜಿಬೈಲ್, ದಿನೇಶ ಹೆಗಡೆ ಜನನಿ, ಗೀತಾ ಬೆಳಸಲಿಗೆ, ರಾಘವೇಂದ್ರ ಹೆಗಡೆ ಇತರರು ಇದ್ದರು.
ನಿಮ್ಮ ಮನವಿಗೂ ಮೊದಲೇ ಕಲಾವಿದರ, ಕಲಾ ಸಂಘಟನೆಗಳಿಗೆ ಸಮಸ್ಯೆ ಆದದ್ದು ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಇಲಾಖೆ ಸಚಿವರ ಜೊತೆ ಮಾತನಾಡಿದ್ದೇನೆ. ಫಲಕ ಇಲ್ಲದ ಸಂಸ್ಥೆಗೆ ಬಿಗು ಮಾಡಲು ಹೋಗಿ ಕ್ರಿಯಾಶೀಲ ಸಂಸ್ಥೆಗಳಿಗೂ ಸಮಸ್ಯೆ ಆಗಿದೆ ಎಂಬುದು ಗಮನಕ್ಕೆ ಬಂದಿದೆ ಎಂದವರು ಹೇಳಿದ್ದಾರೆ. ಸಮಸ್ಯೆ ಬಗೆ ಹರಿಯುವ ವಿಶ್ವಾಸವಿದೆ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್