ಭಟ್ಕಳ: ವಾಹನ ಸವಾರರ ಸಂಚಾರ ನಿಯಮ ಪಾಲನೆಯ ಮೇಲೆ ನಿಗಾ ಇಡಲು ಸ್ವಾತಂತ್ರ‍್ಯದ ಅಮೃತ ಮಹೋತ್ಸವದಂದು ಇಲ್ಲಿನ ಸಂಶುದ್ದೀನ್ ಸರ್ಕಲ್‌ನಲ್ಲಿ ಪೊಲೀಸ್ ಟ್ರಾಫಿಕ್ ಚೌಕಿಯನ್ನು ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಟ್ಕಳದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ಹೆಚ್ಚಳ ಪೊಲೀಸರಿಗೂ ನಿಯಂತ್ರಣಕ್ಕೆ ಕಷ್ಟಕರವಾಗಿತ್ತು. ಮಳೆ, ಗಾಳಿ, ಬಿಸಿಲು, ಚಳಿಯೆನ್ನದೇ ಟ್ರಾಫಿಕ್ ನಿಯಂತ್ರಣದ ಕೆಲಸಕ್ಕೆ ಒಂದು ಟ್ರಾಫಿಕ್ ಚೌಕಿಯ ಅವಶ್ಯಕತೆಯನ್ನು ಅರಿತು ನಗರ ಠಾಣೆಯಿಂದ ಚೌಕಿ ನಿರ್ಮಿಸಲಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಟ್ರಾಫಿಕ್ ಕಂಟ್ರೋಲ್‌ಗೆ ಪೊಲೀಸ್ ಸಿಬ್ಬಂದಿಗೆ ಹೆದ್ದಾರಿಗಳಲ್ಲಿ ನಿಲ್ಲಲು ಸಮಸ್ಯೆಯಾಗುತ್ತಿತ್ತು. ಈಗ ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದರು.
ನಗರ ಠಾಣಾ ಸಿಪಿಐ ದಿವಾಕರ ಪಿ.ಎಮ್. ಮಾತನಾಡಿ, ಸಂಶುದ್ದೀನ್ ಸರ್ಕಲ್ ಭಾಗದಲ್ಲಿ ಹಾಗೂ ಭಟ್ಕಳದ ಹೃದಯ ಭಾಗದಲ್ಲಿ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಮಾಡಲು ಟ್ರಾಫಿಕ್ ಚೌಕಿ ನಿರ್ಮಿಸಿದ್ದೇವೆ. ವಾಹನ ಸವಾರರಲ್ಲಿ ಪೊಲೀಸರಿದ್ದಾರೆ ಎಂಬುದು ತಲೆಯಲ್ಲಿದ್ದರೆ ಸ್ವಯಂಪ್ರೇರಿತರಾಗಿ ಸಂಚಾರ ನಿಯಮ ಪಾಲನೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಪೊಲೀಸ್ ಠಾಣಾ ಸಿಪಿಐ ಮಹಾಬಲೇಶ್ವರ ನಾಯ್ಕ, ನಗರ ಠಾಣೆ ಪಿಎಸ್‌ಐಗಳಾದ ಹೆಚ್.ಕುಡಗುಂಟಿ, ಸುಮಾ ಬಿ., ಗ್ರಾಮೀಣ ಠಾಣೆ ಪಿಎಸ್‌ಐ ಭರತಕುಮಾರ ಹಾಗೂ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಇದ್ದರು.
ಕಳೆದ ತಿಂಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭಟ್ಕಳದಲ್ಲಿ ನಡೆಸಿದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಸಂಚಾರ ಸಮಸ್ಯೆಗಳ ಬಗ್ಗೆ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಹೆದ್ದಾರಿ ಬಳಿ ಪೊಲೀಸ್ ಚೌಕಿ ನಿರ್ಮಿಸಲಾಗಿದೆ.:: ದಿವಾಕರ ಪಿ.ಎಮ್., ನಗರ ಠಾಣಾ ಸಿಪಿಐ