ಶಿರಸಿ: ಹರ್ ಘರ್ ತಿರಂಗದ ಅಭಿಯಾನದ ಭಾಗವಾಗಿ ತಾಯಿ ಊರಿನಲ್ಲಿ ಧ್ವಜ ವಂದನೆ ಮಾಡಿದರೆ ಮಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರು ಬೆಂಗಳೂರಿನ ಮನೆ ಹಾಗೂ ವಿಧಾನಸೌಧದಲ್ಲಿ ಧ್ವಜ ವಂದನೆ ಮಾಡಿದರು.
ಸ್ವಗೃಹ ಶಿರಸಿಯ ಕಾಗೇರಿ ಊರಿನಲ್ಲಿ ಇರುವ ಮನೆಯಲ್ಲಿ ಮನೆ ಮಂದಿಯೆಲ್ಲ ಧ್ವಜಾರೋಹಣ ನಡೆಸಿ ಧ್ವಜ ವಂದನೆ ನಡೆಸಿ ಹರ್ ಘರ್ ತಿರಂಗಾದ ಸಂಭ್ರಮದಲ್ಲಿ ಪಾಲ್ಗೊಂಡರು.
ಕಾಗೇರಿ ಅವರ ತಾಯಿ 83 ವಯೋಮಾನದ ಸರ್ವೇಶ್ವರಿ ಅನಂತ ಹೆಗಡೆ ಅವರು ಧ್ವಜ ವಂದನೆ ಸಲ್ಲಿಸಿ ಜನಗಣಮನ ಹಾಡಿದರು. ಕಾಗೇರಿ ಅವರ ಹಿರಿಯ ಸಹೋದರ ಶಿವರಾಮ ಹೆಗಡೆ ಕಾಗೇರಿ, ವಕೀಲ ಗಣಪತಿ ಹೆಗಡೆ, ಪ್ರಗತಿಪರ ರೈತ ಪರಮೇಶ್ವರ ಹೆಗಡೆ, ಪತ್ನಿ ಭಾರತಿ ಹೆಗಡೆ ಸೇರಿದಂತೆ ಇತರರು ಧ್ವಜವಂದನೆ ಸಲ್ಲಿಸಿದರು.
ಅತ್ತ ಸ್ಪೀಕರ್ ಕಾಗೇರಿ ಅವರು ಬೆಂಗಳೂರಿನ ತಮ್ಮ ನಿವಾಸದ ಮೇಲೆ, ವಿಧಾನಸೌಧದ ತಮ್ಮ ಕಚೇರಿಯ ಎದುರುಗಡೆ ತ್ರಿವರ್ಣ ಧ್ವಜ ಹಾರಿಸಿ, ವಿಧಾನಸೌಧದ ಮುಂಬಾಗದ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಭಾಪತಿ ರಘುನಾಥರಾವ್ ಮಲ್ಕಾಪುರೆ, ಸಚಿವ ಸುನೀಲ್ ಕುಮಾರ್ ಹಾಗೂ ಇತರೆ ಸಚಿವರೊಂದಿಗೆ ಪಾಲ್ಗೊಂಡರು.