ಕುಮಟಾ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75ನೇ ವರ್ಷದ ಅಮೃತ ಮಹೋತ್ಸವ ಆಚರಿಸುಕೊಳ್ಳುತ್ತಿರುವ ಸಂದರ್ಭದಲ್ಲೂ ಅದೆಷ್ಟೊ ಹಳ್ಳಿಗಳು ಈತನಕ ಮೂಲ ಸೌಕರ್ಯಗಳಿಂದ ವಂಚಿತವಾಗಿ ಕುಗ್ರಾಮಗಳಾಗಿವೆ. ಸೂಕ್ತ ರಸ್ತೆ ಇಲ್ಲ. ಸೇತುವೆ ಇಲ್ಲ. ಅನಾರೋಗ್ಯ ಪೀಡಿತರನ್ನು ಕಂಬಳಿಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸುವ ದುಃಸ್ಥಿತಿ ಎದುರಾಗಿದೆ. ಅಂಥ ಕುಗ್ರಾಮಗಳ ಸಾಲಿಗೆ ತಾಲೂಕಿನ ಅಳಕೋಡ್ ಗ್ರಾಮ ಪಂಚಾಯತ್ ವ್ಯಾಪ್ತಿಗೊಳ್ಪಡುವ ಸೇಡಿಗದ್ದೆ ಗ್ರಾಮವೂ ಸೇರುತ್ತದೆ.
ಸೇಡಿಗದ್ದೆ ಗ್ರಾಮ ನೋಡಲು ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದ್ದರೂ ಆಧುನಿಕತೆಯ ಸೌಲಭ್ಯದಿಂದ ದೂರ ಉಳಿದಿದೆ. ಈ ಕುಗ್ರಾಮದಲ್ಲಿ ಸುಮಾರು 50ಕ್ಕೂ ಅಧಿಕ ಜನಸಂಖ್ಯೆ ಇದ್ದು, ಸೇಡಿಗದ್ದೆ ಗ್ರಾಮಕ್ಕೆ ಹೊಂದಿಕೊಂಡು ಶೇಡೂರು, ವಾಡಗಾರ್, ಬೇಣದಹಳ್ಳಿ, ಅಂಗಡಿಬೈಲ್, ಅಚ್ವೆ ಗ್ರಾಮಗಳಿದ್ದು, ಈ ಭಾಗದಲ್ಲಿ ಸುಮಾರು ಐನೂರಕ್ಕೂ ಅಧಿಕ ಕುಟುಂಬಗಳಿವೆ. ಈ ಎಲ್ಲ ಕುಟುಂಬಗಳ ಜನರು ಬೆಳ್ಳಂಕಿ ರಸ್ತೆಗೆ ಬರಲು ಇರುವ ಸೇಡಿಗದ್ದೆಯ ಕಾಲಹಾದಿಯಲ್ಲಿ 4 ಕಿಮೀ ಕಾಲ್ನಡಿಗೆಯಲ್ಲಿಯೇ ಕ್ರಮಿಸಬೇಕಾದ ದುಃಸ್ಥಿತಿ ಇದೆ. ಈ ಗ್ರಾಮದಲ್ಲಿ ಶಾಲಾ-ಕಾಲೇಜ್‌ಗಳಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಿಗಳು, ಕೂಲಿಕಾರರು ಪ್ರತಿನಿತ್ಯ 4 ಕಿಮೀ ಕ್ರಮಿಸಿ, ಬೆಳ್ಳಂಕಿಗೆ ಬಂದು ಬಸ್ ಹಿಡಿಯಬೇಕಿದೆ.
ಇನ್ನು ಸೇಡಿಗದ್ದೆ ಗ್ರಾಮದ ಯಾರಿಗಾದರು ಅನಾರೋಗ್ಯ ಪೀಡಿತರಾದರೆ ಅವರನ್ನು ಆಸ್ಪತ್ರೆಗೆ ಹೊತ್ತಿಕೊಂಡು ಹೋಗುವ ದುಃಸ್ಥಿತಿ ಇದೆ. ನಿನ್ನೆ ಕೂಡ ಎರಡನೇ ತರಗತಿಯ ಬಾಲಕನೋರ್ವ ಆಟವಾಡುವಾಗ ಕಾಲಿಗೆ ಗಂಭೀರ ಗಾಯವಾಗಿದೆ. ಆತನನ್ನು ಹೊತ್ತುಕೊಂಡೆ 4 ಕಿಮೀ ಕ್ರಮಿಸಿ, ಬೆಳ್ಳಂಕಿಯಲ್ಲಿ ಬಂದ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಹಾಗಾಗಿ ಸೇಡಿಗದ್ದೆ ಗ್ರಾಮಸ್ಥರು ಹಲ ವರ್ಷಗಳಿಂದ ರಸ್ತೆ ನಿರ್ಮಿಸಿಕೊಡುವಂತೆ ಸ್ಥಳೀಯ ಪಂಚಾಯತ್ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಒತ್ತಾಯಿಸುತ್ತಲೇ ಬಂದಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಕುಮಟಾ ತಾಲೂಕು ಕುಂಬ್ರಿಮರಾಠಿ ಸಮಾಜದ ಅಧ್ಯಕ್ಷ ಪುರುಷೋತ್ತಮ್ ಸೋಮ ಮರಾಠಿಯವರ ಆರೋಪವಾಗಿದೆ.
ಕುಮಟಾ ತಾಲೂಕು ಆಡಳಿತದ ಕಡೆಗಣನೆಗೊಳಗಾದ ಸೇಡಿಗದ್ದೆ ಗ್ರಾಮಕ್ಕೆ ಸೂಕ್ತ ರಸ್ತೆ ನಿರ್ಮಾಣವಾದರೆ ಆ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗುವ ಜೊತೆಗೆ ಅರ್ಧಕ್ಕರ್ಧಷ್ಟು ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಶಾಸಕರು, ಈ ಭಾಗದ ಜನಪ್ರತಿನಿಧಿಗಳು ಸೂಕ್ತ ಗಮನ ಹರಿಸಿ, ಈ ಭಾಗಕ್ಕೆ ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಚುನಾವಣಾ ಬಹಿಷ್ಕಾರ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಆ ಭಾಗದ ಗ್ರಾಮಸ್ಥರಾದ ಪುರುಷೋತ್ತಮ್ ಮರಾಠಿ, ಗಣಪತಿ, ಶೇಖರ, ಕಮಲಾಕರ, ಸವಿತಾ ಇತರೆ ಗ್ರಾಮಸ್ಥರು ಎಚ್ಚರಿಸಿದ್ದಾರೆ.