ಕಾರವಾರ: ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿರುವ ‘ಹರ್ ಘರ್ ತಿರಂಗಾ ಅಭಿಯಾನ ದೇಶಪ್ರೇಮ ಮೆರೆಯಲು ನಮಗೆಲ್ಲ ಸಿಕ್ಕ ಸುವರ್ಣವಕಾಶ. ಕ್ಷೇತ್ರದಲ್ಲಿ ಸುಮಾರು 28,000 ಧ್ವಜಗಳನ್ನು ಸ್ವಂತ ಖರ್ಚಿನಲ್ಲಿ ಪ್ರತಿಯೊಂದು ಪಂಚಾಯತಿಗೆ ಭೇಟಿ ನೀಡಿ ವಿತರಿಸುತ್ತೇನೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ ಗ್ರಾಮೀಣ ಹಾಗೂ ನಗರ ಘಟಕದಿಂದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಪಕ್ಷ ಬೇಧ ಮರೆತು ಪ್ರತಿಯೊಂದು ಮನೆಗೂ ಧ್ವಜ ತಲುಪಿಸುವ ಕೆಲಸ ಆಗಬೇಕು. ಧ್ವಜಗಳನ್ನು ಹಾರಿಸುವ ವೇಳೆ ನಿಯಮಗಳನ್ನು ಪಾಲಿಸಿ, ಎಲ್ಲೂ ಅಗೌರವ ಆಗದಂತೆ ನೋಡಿಕೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ ಮಾತನಾಡಿ, ನಮ್ಮದು ಪುರಾತನ ಇತಿಹಾಸ ಹೊಂದಿರುವ ದೇಶ. ಹಾಗೆ ಸ್ವಾತಂತ್ರ್ಯ ಹೋರಾಟಕ್ಕೂ ನೂರಾರು ವರ್ಷಗಳ ಇತಿಹಾಸವಿದೆ ಎಂದ ಅವರು, ಮನೆ ಮನೆಯಲ್ಲಿ ಧ್ವಜಾರೋಹಣ ಮಾಡುವ ಕುರಿತು ವಿವರಿಸಿದರು.
ಪ್ರಾಸ್ತವಿಕವಾಗಿ ನಾಗರಾಜ ನಾಯಕ್ ತೊರ್ಕೆ ಮಾತನಾಡಿ, ಪ್ರತಿಯೊಂದು ಮನೆಯಲ್ಲಿ ರಾಷ್ಟ್ರ ದ್ವಜಾರೋಹಣ ಮಾಡಿ ಅಮೃತ ಮಹೋತ್ಸವ ವಿಜೃಂಭಣೆಯಿಂದ ಆಚರಿಸಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಸಹ ಪ್ರಭಾರಿ ಎನ್.ಎಸ್.ಹೆಗಡೆ, ಯಾವ ರೀತಿ ನಾವು ಧ್ವಜಕ್ಕೆ ಗೌರವ ಕೊಡಬೇಕು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಪ್ರತಿಯೊಂದು ಬೂತ್ ಮಟ್ಟದಲ್ಲಿ ನಡೆಯಬೇಕು ಎಂದರು.
ಬಿಜೆಪಿ ನಗರ ಅಧ್ಯಕ್ಷ ನಾಗೇಶ್ ಕುರ್ಡೇಕರ್ ಸ್ವಾಗತಿಸಿದರು. ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಗ್ರಾಮೀಣ ಪ್ರಭಾರಿ ಗಜಾನನ ಗುನಗಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ತಾಮ್ಸೆ, ವಿಶೇಷ ಆಮಂತ್ರಿತ ಮನೋಜ್ ಭಟ್ ಉಪಸ್ಥಿತರಿದ್ದರು.