ಹೊನ್ನಾವರ: ತಾಲೂಕು ಪಂಚಾಯತ್ ಸಭಾಭಾವನದಲ್ಲಿ ನೆಹರು ಯುವ ಕೇಂದ್ರದಿಂದ ಸಂಘ- ಸಂಸ್ಥೆಗಳಿಗೆ ಮಾಹಿತಿ ಕಾರ್ಯಗಾರ, ಕ್ರೀಡಾ ಉಪಕರಣ ವಿತರಣೆ ಕಾರ್ಯಕ್ರಮ ನಡೆಯಿತು.
ತಾ.ಪಂ ಇಒ ಸುರೇಶ್ ನಾಯ್ಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಯಶ್ವಸಿ ಸಂಘ ರೂಪುಗೊಳ್ಳಲು ನಾಯಕತ್ವ ಗುಣ ಇರಬೇಕು. ಅದು ತಾಲೂಕಿನ ಯುವ ಸಂಘಟನೆಯಲ್ಲಿದೆ. ಸಂಸ್ಕಾರ, ಸಂಸ್ಕೃತಿ ಉಳಿದಿರುವುದು ನಮ್ಮ ಭಾರತದಲ್ಲಿ ಮಾತ್ರ. ಹರ್ ಘರ್ ತಿರಂಗಾ ಅಭಿಯಾನಕ್ಕೆ ಎಲ್ಲರೂ ಭಾಗವಹಿಸಿ ಎಂದು ಕರೆ ನೀಡಿದರು. ನಾವೆಲ್ಲರೂ ಸೇರಿ ರಾಷ್ಟ್ರದ ಗೌರವ ಹೆಚ್ಚಿಸಲು ಪ್ರತಿ ಮನೆಯ ಮೇಲೆ ಧ್ವಜಾರೋಹನ ಮಾಡೋಣ. ನಮ್ಮ ಚಿಂತನೆಗಳು ಮಾತ್ರ ಯಾವತ್ತೂ ಧನಾತ್ಮಕವಾಗಿ ಸಮಾಜದ ಪರವಾಗಿ ಇರಬೇಕು ಎಂದರು.
ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಯಶ್ವಂತ್ ಯಾದವ್ ಮಾತನಾಡಿ, ಯುವಕ ಸಂಘಗಳ ಸಬಲೀಕರಣವಾದರೆ ಗ್ರಾಮದ ಅಭಿವೃದ್ಧಿ ಸಾಧ್ಯ. ಈ ಬಾರಿ ಸ್ವಾತಂತ್ರ‍್ಯೋತ್ಸವದ ಅಮ್ರತಮಹೋತ್ಸವದಲ್ಲಿದ್ದೇವೆ. ಸಂಭ್ರಮ ಸಡಗರದಿಂದ ಆಚರಿಸಿ, ಅದರ ಮಹತ್ವವನ್ನು ಅರಿತುಕೊಳ್ಳಬೇಕು ಎಂದರು. ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಮೀರಾ ನಾಯ್ಕ, ತಾಲೂಕಿನಲ್ಲಿ 36 ಯುವಕ ಸಂಘಗಳು ನೊಂದಣಿಯಾಗಿದೆ.ಇನ್ನೂ ಬಹಳಷ್ಟು ಸಂಘಗಳು ನೊಂದಣಿಯಾಗದೆ ಹಾಗೇ ಉಳಿದಿದೆ. ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮವನ್ನು ಯಶ್ವಸಿಯಾಗಿ ಸಂಘಗಳು ನಿಭಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ, ಯುವಕ ಸಂಘಗಳು ಸಕ್ರಿಯವಾಗಬೇಕು ಎನ್ನುವುದು ಮುಖ್ಯ ಉದ್ದೇಶವಾಗಿದೆ. ಸಂಘಟನೆ ಮಾಡಿ ಸಮಾಜಮುಖಿ ಕಾರ್ಯ ಮಾಡುವಂತೆ ಕೆಲಸ ಆಗಬೇಕು ಎಂದರು.
ತಾಲೂಕಿನ ಒಂಬತ್ತು ಯುವಕ ಸಂಘ, ಒಂದು ಮಹಿಳಾ ಸಂಘಕ್ಕೆ ಕ್ರೀಡಾ ಸಾಮಗ್ರಿ ವಿತರಿಸಿದರು. ಯುವಜನ ಕ್ರೀಡಾಧಿಕಾರಿ ಸುದೀಶ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನೆಯ ಪ್ರಮುಖರಾದ ರಾಘವೇಂದ್ರ ಮೇಸ್ತ ಸೇರಿದಂತೆ ವಿವಿಧ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ನೆಹರು ಯುವ ಕೇಂದ್ರದಿಂದ ಸಂಘ- ಸಂಸ್ಥೆಗಳಿಗೆ ಮಾಹಿತಿ ಕಾರ್ಯಗಾರ
