ಕಾರವಾರ: ಗುತ್ತಿಗೆದಾರರು ಹೇಳಿದಂತೆ ನಾವು ಕೇಳೋದಿಕ್ಕೆ ಆಗಲ್ಲ. ಅವರು ಇಲಾಖೆ- ಅಧಿಕಾರಿಗಳ ಮಾತನ್ನ ಕೇಳಬೇಕು. ಕೇಳದಿದ್ದರೆ ಅಂಥವರ ಗುತ್ತಿಗೆಯನ್ನ ರದ್ದು ಮಾಡಿ, ದಂಡ ವಿಧಿಸಿ. ಗುತ್ತಿಗೆದಾರರು ಸರ್ಕಾರ ನಡೆಸುತ್ತಾರ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹರಿಹಾಯ್ದರು.
ಖಾರ್ಲೆಂಡ, ಆಸ್ಪತ್ರೆ ಮತ್ತು ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೆಆರ್‌ಐಡಿಸಿಎಲ್ ಪ್ರಗತಿಯ ವರದಿ ಕೇಳಿದರು. ಈ ವೇಳೆ ಅಧಿಕಾರಿಗಳು ವರದಿ ನೀಡುತ್ತಾ, ಜಿಲ್ಲೆಯಲ್ಲಿ ಏಳು ಸೇತುವೆಗಳ ಪ್ಯಾಕೇಜ್ ಮಾಡಲಾಗಿತ್ತು. ಅದರಲ್ಲಿ ಇಡಗುಂಜಿಯ ಸೇತುವೆ ಕಾಮಗಾರಿಯನ್ನು ಕೈಬಿಡಲಾಗಿದೆ. ಉಳಿದ ಆರಲ್ಲಿ ಮೂರು ಸೇತುವೆಯ ಮುಖ್ಯ ಭಾಗ ಪೂರ್ಣಗೊಂಡಿದೆ. ಸಂಪರ್ಕ ರಸ್ತೆಗಳು ಆಗಬೇಕಿದೆ. ಮಳೆ ನಿಲ್ಲುತ್ತಿದ್ದಂತೆ ಪೂರ್ಣಗೊಳಿಸಿಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಪೂಜಾರಿ, 2018- 19ನೇ ಸಾಲಿನ ಸೇತುವೆಗಳು 2022- 23ನೇ ಸಾಲಿನಲ್ಲೂ ಪೂರ್ಣಗೊಂಡಿಲ್ಲವೆAದರೆ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಬರುತ್ತದೆ. ಕಾಮಗಾರಿ ಗುತ್ತಿಗೆ ಪಡೆದವರು ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಅಂಥ ಗುತ್ತಿಗೆದಾರರಿ ದಂಡ ಹಾಕಿ, ಅವರನ್ನು ಕೈಬಿಡಿ ಎಂದು ತಾಕೀತು ಮಾಡಿದರು. 2023ರ ಮಾರ್ಚ್ ಒಳಗೆ ಪೂರ್ಣಗೊಳಿಸುತ್ತೇವೆ. ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕೆಆರ್‌ಐಡಿಸಿಎಲ್‌ನ ಮುಖ್ಯ ಎಂಜಿನಿಯರ್ ತಿಳಿಸಿದರು. ಇನ್ನೋರ್ವ ಸೂಪರಿಂಟೆಂಡ್ ಎಂಜಿನಿಯರ್, ಭೂಸ್ವಾಧೀನ ಪ್ರಕ್ರಿಯೆಗಳು ಕೆಲವು ಬಾಕಿ ಇದ್ದವು. ಅವೆಲ್ಲ ಈಗ ಕ್ಲಿಯರ್ ಆಗಿವೆ. ಮಂಜುಗುಣಿ- ಗಂಗಾವಳಿ, ಐಗಳಕುರ್ವೆ, ಕತಗಾಲದ ಸೇತುವೆ ಕಾಮಗಾರಿಗಳನ್ನ ಮಾರ್ಚ್ ಒಳಗೆ ಪೂರ್ಣಗೊಳಿಸಿಕೊಡುತ್ತೇವೆ ಎಂದರು.
ಇದಕ್ಕೆ ಕುಮಟಾ ಶಾಸಕ ದಿನಕರ ಶೆಟ್ಟಿ, ನಿಮ್ಮ ಬಳಿ ಕಾಮಗಾರಿಯ ಬಗ್ಗೆ ಪ್ಲಾನ್ ಇಲ್ಲ. ಸೇತುವೆ ಮಾಡಿದ ಮೇಲೆ ಸಂಪರ್ಕ ರಸ್ತೆ ಮಾಡಲ್ಲ. ನಾವೇನೋ ಮಾಡಿದಂತೆ ಹಗರಣದ ಸರಮಾಲೆ ಟಿವಿಗಳಲ್ಲಿ ಬಂತು ಎಂದು ಬೇಸರ ವ್ಯಕ್ತಪಡಿಸಿದರು. ಅಂತಿಮವಾಗಿ, ಈ ಮೂರು ಸೇತುವೆಗೆ ಸಂಪರ್ಕ ರಸ್ತೆ ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಫೆಬ್ರುವರಿ ತಿಂಗಳಲ್ಲಿ ಮುಗಿಸಿಕೊಡಬೇಕು. ಇವು ನೂರಾರು ಕೋಟಿಯ ಕಾಮಗಾರಿ. ಈ ಗುತ್ತಿಗೆದಾರ ಇಲ್ಲದಿದ್ದರೆ ಮತ್ತೊಬ್ಬರು ಸಿಗತ್ತಾರೆ. ಪೂರ್ಣಗೊಳಿಸಿಕೊಡದಿದ್ದರೆ ಆತನ ವಿರುದ್ಧ ದೂರು ದಾಖಲಿಸಿ ಎಂದು ಸೂಚಿಸಿದರು.
ಇನ್ನು ಸಣ್ಣ ನಿರಾವರಿ ಇಲಾಖೆಯ ಜಿಲ್ಲಾ ಕಚೇರಿಯನ್ನ ಹಳಿಯಾಳದಲ್ಲಿ ಯಾಕೆ ಮಾಡಿದ್ದು? ಕೇಂದ್ರ ಸ್ಥಾಣ ಕಾರವಾರ. ಕೆಡಿಪಿಯಲ್ಲಿ ನಿರ್ಣಯವಾಗತ್ತೆ, ಸರ್ಕಾರಕ್ಕೆ ನಾನು ಹೇಳುತ್ತೇನೆ. ಜಿಲ್ಲಾ ಕೇಂದ್ರಕ್ಕೆ ಕಚೇರಿಯನ್ನ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ಅಧಿಕಾರಿಗಳಿಗೆ ಸಚಿವ ಪೂಜಾರಿ ತಿಳಿಸಿದರು. ಪ್ರಗತಿ ವರದಿ ಪಡೆದ ಬಳಿಕ, ಇಲಾಖೆಯ ಅಧಿಕಾರಿಗಳು 68 ಕಾಮಗಾರಿಗಳಲ್ಲಿ 25 ಆಗಿದೆ. 35 ಕಾಮಗಾರಿಗಳಲ್ಲಿ ಆರು ಮರು ಟೆಂಡರ್, 25 ಮುಂದಿನ ಶುಕ್ರವಾರದೊಳಗೆ ಟೆಂಡರ್ ಮುಗಿಸಿ ಕಾಮಗಾರಿಗೆ ಆದೇಶ ಪ್ರತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ ಆರು ಕಾಮಗಾರಿಗಳಿಗೆ ಒಂದು ತಿಂಗಳೊಳಗೆ ಕಾಮಗಾರಿ ಆದೇಶ ನೀಡಬೇಕು ಎಂದರು.
ಪಶ್ಚಿಮ ವಾಹಿನಿಯಲ್ಲಿ ಹರಿದು ಹೋಗಿ ಸಮುದ್ರ ಸೇರುವಂತಹ ನೀರನ್ನು ಶೇಖರಿಸಲು 100 ಕೋಟಿ ವೆಚ್ಚದಲ್ಲಿ 77 ಸಣ್ಣ ಅಣೆಕಟ್ಟು ಕಾಮಗಾರಿಯಲ್ಲಿ 67 ಕಾಮಗಾರಿಗೆ ಆದೇಶವಾಗಿದ್ದು, ಅದರಲ್ಲಿ ಅಂದಾಜು 27 ಕಾಮಗಾರಿಗಳು ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿಗಳನ್ನು ಆಗಸ್ಟ್ 12ರ ಒಳಗಾಗಿ ಪ್ರಾರಂಭಿಸಿ ಮುಂದಿನ ಕೆಡಿಪಿ ಸಭೆಯಲ್ಲಿ ಕಾಮಗಾರಿ ಬಗ್ಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು 28 ಸೇತುವೆ ಕಾಮಗಾರಿ ಇದ್ದು, ಅದರಲ್ಲಿ ಪ್ರಮುಖ 6 ಸೇತುವೆ ಕಾಮಗಾರಿಗಳಲ್ಲಿ ಭಾಗಶಃ 3 ಕಾಮಗಾರಿಗಳು ಪೂರ್ಣಗೊಂಡಿವೆ. 22 ಚಿಕ್ಕ ಸೇತುವೆ ಕಾಮಗಾರಿಗಳಲ್ಲಿ 9 ಸೇತುವೆ ಕಾಮಗಾರಿ ಪೂರ್ಣಗೋಂಡಿದ್ದು, ಬಾಕಿ ಉಳಿದ ಸೇತುವೆ ಕಾಮಗಾರಿಯನ್ನು ಮಾರ್ಚ್ ಒಳಗಾಗಿ ಪೂರ್ಣಗೊಳಿಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ರಸ್ತೆ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಇದೇ ವೇಳೆ, ಎಂಜಿನಿಯರ್‌ಗಳ ಕೇಂದ್ರ ಸ್ಥಾನ ಕಾರವಾರ ಆಗಿರುವಂತೆ ಕ್ರಮ ವಹಿಸಲು ಸೂಚಿಸಿದರು.
ಹೆಲ್ತ್ ಎಂಜಿನಿಯರ್ ಪ್ರಗತಿ ವರದಿ ನೀಡುತ್ತ, ಜಿಲ್ಲಾ ಆಸ್ಪತ್ರೆಯ 6 ಮಹಡಿ ಕಟ್ಟಡ ನಿರ್ಮಾಣಕ್ಕಾಗಿ 150 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ 2020ರಲ್ಲಿ ಆರಂಭವಾಗಬೇಕಿತ್ತು, ವಿಳಂಬವಾಗಿದೆ ಎಂದರು. ಇದಕ್ಕೆ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಅಸಮಾಧಾನ ವ್ಯಕ್ತಪಡಿಸಿ, ಇನ್ನೂ ಗ್ರೌಂಡ್ ಫ್ಲೋರ್ ಆಗಿದೆ. ಏಪ್ರಿಲ್ 2021ರಲ್ಲಿ ಆರಂಭವಾಗಿದೆ. ಇನ್ನೂ ಒಂದು ಫ್ಲೋರ್ ಆಗಿಲ್ಲ. 18 ತಿಂಗಳಲ್ಲಿ ಐದು ಫ್ಲೋರ್ ಕಟ್ಟಬೇಕಿತ್ತು ಎಂದ ಅವರು, ಈಗ ವೈದ್ಯರಿದ್ದರೂ ವ್ಯವಸ್ಥೆ ಇಲ್ಲದಂತಾಗಿದೆ. ಕೋವಿಡ್ ಸಂದರ್ಭ ಪಾರ್ಕಿಂಗ್ ಲಾಟ್‌ಗಳನ್ನ ಬಳಸಿಕೊಂಡಿದ್ದೇವೆ ಎಂದು ಸಚಿವರ ಗಮನಕ್ಕೆ ತಂದರು.
ಈ ವೇಳೆ ಸಚಿವ ಪೂಜಾರಿ, ಸಭೆಗೆ ಹಾಜರಾಗದಿದ್ದಕ್ಕೆ ಎಕ್ಸಿಕ್ಯುಟಿವ್ ಎಂಜಿನಿಯರ್‌ಗೆ ನೋಟಿಸ್ ಕೊಡಿ ಎಂದರು. ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ, ಎರಡು ಮೂರು ತಿಂಗಳಲ್ಲಿ ಎಂಆರ್‌ಐ ಸ್ಕಾö್ಯನರ್ ಬರತ್ತೆ. ರೇಡಿಯಾಲಜಿಸ್ಟ್ ಇದ್ದಾರೆ ಎಂದರು. ಜಿಲ್ಲಾಧಿಕಾರಿ, ಕನಿಷ್ಠ 25 ಎಕರೆ ಎಂಸಿಐ ನಿಯಮಾವಣಿ ಪ್ರಕಾರ ಬೇಕು. ಜೈಲು ಜಾಗ ತೋರ್ಸಿದ್ದೆವು. ಜೈಲಿಗೆ ಅಂಕೋಲಾದಲ್ಲಿ ಜಾಗ ನೋಡಿದ್ದೇವೆ. ಆಸ್ಪತ್ರೆಗೆ ಜೈಲು ಜಾಗ ಕೂಡ ಬೇಕೇ ಬೇಕು. ಕ್ಯಾಥ್ಲ್ಯಾಬ್, ಎಂಆರ್‌ಐ ಮಾಡಬೇಕಿದೆ. ನ್ಯೂರಾಲಜಿಸ್ಟ್, ಕಾರ್ಡಿಯಾಲಜಿಸ್ಟ್ ಬೇಕು ಎಂಬುದನ್ನ ತಿಳಿಸಿದರು. ಬೆಂಗಳೂರಿಗೆ ಬನ್ನಿ, ಸಚಿವರೊಂದಿಗೆ ಒಂದು ಸಭೆ ನಡೆಸೋಣ ಎಂದು ಸಚಿವ ಪೂಜಾರಿ ಡೀನ್‌ಗೆ ತಿಳಿಸಿದರು.