ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಒತ್ತಾಯಿಸಿ ಸೋಮವಾರ ನಗರದ ಜನತೆ ರಕ್ತದಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.
ನಗರಸಭೆಯ ಉದ್ಯಾನವನವ ಎದುರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ರಕ್ತದಿಂದ ಪತ್ರ ಬರೆಯುವ ಚಳುವಳಿಗೆ ಚಾಲನೆ ನಿಡಲಾಯಿತು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ರಕ್ತದಿಂದ ಪ್ರಧಾನಿಗೆ ಪತ್ರ ಬರೆದು ಉತ್ತರಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿಕೊಡುವಂತೆ ಆಗ್ರಹಿಸಿದ್ದಾರೆ. ವಿಶೇಷ ಅಂದ್ರೆ 85 ವರ್ಷದ, ನಡೆದಾಡಲೂ ಆಗದ ವೃದ್ಧೆ, 8 ತಿಂಗಳ ಗರ್ಭಿಣಿ ಸ್ವಯಂಪ್ರೇರಿತರಾಗಿ ಹೋರಾಟಕ್ಕೆ ಬಂದು ಪ್ರಧಾನಿಗೆ ಪತ್ರ ಬರೆದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಆಗ್ರಹಿಸಿದ್ದಾರೆ.
ಚಳುವಳಿಯಲ್ಲಿ ಭಾಗವಹಿಸಿದ ನೂರಾರು ಮಂದಿ ತಮ್ಮ ರಕ್ತವನ್ನು ತೆಗೆದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ರಸ್ತೆಯಲ್ಲಿಯೇ ಅದೆಷ್ಟೋ ಮಂದಿ ಪ್ರಾಣ ಬಿಡುತ್ತಿದ್ದಾರೆ. ಜಿಲ್ಲೆಯಲ್ಲಿ ದೇಶದ ಪ್ರತಿಷ್ಠಿತ ಹತ್ತಾರು ಯೋಜನೆಗಳಿದ್ದರೂ ಜಿಲ್ಲೆಗೆ ಮೂಲಭೂತ ಸೌಕರ್ಯವಾದ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲದಂತಾಗಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಮಂಜೂರಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಆಗಷ್ಟ್ 15 ರ ಸ್ವಾತಂತ್ರ‍್ಯೋತ್ಸವದ ಒಳಗಾಗಿ ಘೋಷಣೆ ಮಾಡಬೇಕು. ಇಲ್ಲದೆ ಇದ್ದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಪ್ರತಿಭಟನೆಯ ಬಳಿಕ ಈಗ ರಕ್ತದಲ್ಲಿ ಪತ್ರ ಬರೆದಿರುವ ಹೋರಾಟಗಾರರು, ಇದ್ಯಾವುದೇ ಒತ್ತಾಯಕ್ಕೂ ಸರ್ಕಾರ ಮಣಿಯದಿದ್ದರೆ ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಾಗಿ ಈ ಆಸ್ಪತ್ರೆಯ ಹೋರಾಟದ ಕಿಚ್ಚು ಇನ್ನು ಯಾವ ರೀತಿ ರೂಪ ತಾಳಲಿದೆ ಎಂಬುದನ್ನ ಕಾದುನೋಡಬೇಕಿದೆ.