ಕಾರವಾರ: ಜಿಲ್ಲೆಯ ಜನತೆಯ ಬೇಡಿಕೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕುಮಟಾದಲ್ಲಿ ಜಾಗ ಗುರುತಿಸಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಜಿಲ್ಲೆಯ ಭೇಟಿಯ ವೇಳೆ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಕುಮಟಾ ಆಸುಪಾಸಿನಲ್ಲಿ ಸುಮಾರು 15 ಎಕರೆ ಜಾಗವಿದ್ದು, ಅರಣ್ಯ ಜಾಗವನ್ನೂ ಬಳಸಿಕೊಂಡು 25 ಎಕರೆಗೆ ಅದನ್ನು ವಿಸ್ತರಿಸಿಕೊಳ್ಳಬಹುದು. ಖಾಸಗಿ ಸಹಭಾಗಿತ್ವದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಬಹುದೊಡ್ಡ ಖಾಸಗಿ ಆಸ್ಪತ್ರೆಗಳ ಜೊತೆ ಮಾತುಕತೆ ನಡೆದಿದೆ. ಕೆಲವೇ ದಿನಗಳಲ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಟ್ರಾಮಾ- ಕ್ರಿಟಿಕಲ್ ಕೇರ್ ಸೆಂಟರ್ ಚಾಮರಾಜನಗರ ಮತ್ತು ಕಾರವಾರಕ್ಕೆ ಮಂಜೂರಾಗಿದೆ. ಅಂಕೋಲಾದ 16.5 ಎಕರೆ ಪ್ರದೇಶದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಆಗಲಿದೆ. ಈ ಎಲ್ಲವನ್ನೂ ಮುಖ್ಯಮಂತ್ರಿಗಳ ಜೊತೆ ತೀರ್ಮಾನ ಮಾಡಿ ಅಂತಿಮ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ವಾರ ಅಥವಾ ಹತ್ತು ದಿನದಲ್ಲಿ ಆರೋಗ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಲ್ಲದೇ ಆಗಸ್ಟ್ 15ರ ಬಳಿಕ ಮುಖ್ಯಮಂತ್ರಿಗಳೂ ಜಿಲ್ಲೆಯ ಕರಾವಳಿಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ಕೊಡಲಿದ್ದಾರೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಹೇಳಿದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಲು ಇನ್ನೂ ಮೂರ್ನಾಲ್ಕು ವರ್ಷಗಳು ತಗಲುತ್ತದೆ. ಹೀಗಾಗಿ ಅದಕ್ಕೂ ಪೂರ್ವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) 160 ಕೋಟಿ ರೂ. ಯೋಜನೆಯಲ್ಲಿ ಟ್ರಾಮಾ ಸೆಂಟರ್ ಹಾಗೂ ತಜ್ಞ ವೈದ್ಯರ ನೇಮಕ ಪ್ರಕ್ರಿಯೆ ತುರ್ತಾಗಿ ನಡೆಯಲಿದೆ ಎಂದು ತಿಳಿಸಿದರು.
ಖಾಸಗಿ ಸಹಭಾಗಿತ್ವದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ:ಸಚಿವ ಪೂಜಾರಿ
