ಕಾರವಾರ: ತಾಲೂಕಿನ ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ‘ಗ್ರೀನ್ ಕಾಂಕ್ರೀಟ್ ಫೇವರ್ ಬ್ಲಾಕ್’ ಪ್ರಾಜೆಕ್ಟ್ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದೆ.
ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೃಷ್ಟಿ ಇನೋವೇಶನ್ ಎಕ್ಸ್ಚೇಂಜ್ ಉನ್ನತ ಶಿಕ್ಷಣ ಇಲಾಖೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ನೆರವಿನಲ್ಲಿ, ಎಬಿವಿಪಿ ಸಹಯೋಗದಲ್ಲಿ ರಾಜ್ಯ ಮಟ್ಟದ ಪ್ರಾಜೆಕ್ಟ್ ಎಕ್ಸಿಬಿಶನ್‌ನ್ನು ಇತ್ತೀಚಿಗೆ ಆಯೋಜಿಸಿತ್ತು. ಈ ವೇಳೆ ತಾಲೂಕಿನ ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪೃಥ್ವಿರಾಜ್ ಜೈನ್, ಕಾರ್ತಿಕ್ ಸ್ವಾಮಿ, ದರ್ಶನ್ ಜೈನ್, ಅಮೂಲ್ಯ ಅವರು ಉಪನ್ಯಾಸಕ ಮಿಥೇಶಕುಮಾರ್ ಅವರ ಮಾರ್ಗದರ್ಶನದಲ್ಲಿ ‘ಗ್ರೀನ್ ಕಾಂಕ್ರೀಟ್ ಫೇವರ್ ಬ್ಲಾಕ್’ ಪ್ರಾಜೆಕ್ಟ್ ಪ್ರಸ್ತುಪಡಿಸಿದ್ದರು.
110 ಕಾಲೇಜುಗಳಿಂದ 8 ವಿಭಾಗಗಳಲ್ಲಿ 280 ಪ್ರಾಜೆಕ್ಟ್ಗಳು ಈ ವೇಳೆ ಪ್ರದರ್ಶನಗೊಂಡಿದ್ದವು. ಪೈಕಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಕಾರವಾರದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರಥಮ ಬಹುಮಾನ ಗಳಿಸಿಕೊಂಡಿದೆ. ಈ ವೇಳೆ ನಡೆದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ, ವಿಟಿಯು ಉಪಕುಲಪತಿಗಳು ಸೇರಿದಂತೆ ಇತರ ಗಣ್ಯರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಏನಿದು ‘ಗ್ರೀನ್ ಕಾಂಕ್ರೀಟ್’?: ಥರ್ಮಲ್ ಪವರ್ ಪ್ಲಾಂಟ್‌ನ ತ್ಯಾಜ್ಯ ಹಾರುಬೂದಿ ಹಾಗೂ ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಹೊರಬರುವ ಜಿಜಿಬಿಎಸ್‌ನ್ನು ಬಳಸಿಕೊಂಡು ಸಿಮೆಂಟ್‌ಗೆ ಪಾರ್ಯಾಯವಾಗಿ ಅನ್ವೇಷಿಸಿರುವ ವಸ್ತುವೇ ಈ ‘ಗ್ರೀನ್ ಕಾಂಕ್ರೀಟ್’.
ಈ ಕೈಗಾರಿಕಾ ತ್ಯಾಜ್ಯಗಳನ್ನ ಕೃಷಿ ಭೂಮಿಯಲ್ಲಿ ವಿಲೇವಾರಿ ಮಾಡುತ್ತಿದ್ದು, ಇದರಿಂದಾಗಿ ಕೃಷಿ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ ಈಗ ಬಳಕೆಯಲ್ಲಿರುವ ಸಿಮೆಂಟ್ ಉತ್ಪಾದನೆಯ ವೇಳೆ ಕಾರ್ಬನ್ ಡೈ ಆಕ್ಸೈಡ್ ಕೂಡ ಉತ್ಪತ್ತಿಯಾಗುತ್ತಿದ್ದು, ಇದು ಹಾನಿಕಾರಕ. ಹೀಗಾಗಿ ಇದನ್ನು ಕಡಿಮೆ ಮಾಡಲು, ಅಂದರೆ ಸಿಮೆಂಟ್‌ಗೆ ಪರ್ಯಾಯವಾಗಿ ಇದನ್ನ ತಯಾರಿಸಲಾಗಿದೆ. ಸಿಮೆಂಟ್‌ಗಿಂತ ಎರಡು ಪಟ್ಟು ಕಂಪ್ರೆಸ್ಸಿವ್ ಸ್ಟ್ರೆಂಥ್, ಸಿಮೆಂಟ್‌ಗಿಂತ ಅತಿ ಬೇಗ ಗಟ್ಟಿಗೊಳ್ಳುವ ಈ ‘ಗ್ರೀನ್ ಕಾಂಕ್ರೀಟ್’ ಉತ್ಪಾದನೆ ವೆಚ್ಚ ಕೂಡ ಕಡಿಮೆ ಎನ್ನುತ್ತಾರೆ ವಿದ್ಯಾರ್ಥಿ ದರ್ಶನ್.