ಕಾರವಾರ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಬೋಧಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಪ್ರಭಾಕರ ರಾಣೆಯವರು ಗುಣಮುಖರಾಗಿರುವುದಾಗಿ ಕ್ರಿಮ್ಸ್ ಪ್ರಕಟಣೆ ತಿಳಿಸಿದೆ.
ಪ್ರಭಾಕರ ರಾಣೆಯವರು ತೀವ್ರ ಅನಾರೋಗ್ಯದಿಂದ ಜು.19ರಂದು ಕ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿಯಲ್ಲಿನ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು. ಇವರಿಗೆ ಕಿಡ್ನಿ, ರಕ್ತದೊತ್ತಡ ತೊಂದರೆ ಹಾಗೂ ಹೃದಯ ಸಂಬಂಧಿತ ತೊಂದರೆಗಳು ಇತ್ತು. ಈ ಎಲ್ಲ ಕಾಯಿಲೆಗಳಿಗೆ ಕ್ರಿಮ್ಸ್ ವೈದ್ಯರ ತಂಡವು ಯಶಸ್ವಿಯಾಗಿ ಚಿಕಿತ್ಸೆಯನ್ನು ನೀಡಿ, ಗುರುವಾರ (ಜು.28) ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಸ್ವಗೃಹಕ್ಕೆ ಕಳುಹಿಸಿಕೊಟ್ಟಿದೆ.
ಇವರಿಗೆ ಚಿಕಿತ್ಸೆ ನೀಡಿದ ವೈದ್ಯರುಗಳಾದ ಡಾ.ಅಮಿತ ಕಾಮತ, ಡಾ.ರಘುರಾಮಚಂದ್ರ ಭಟ್, ಡಾ.ರೋಷನ್, ಡಾ.ಶರತ, ಡಾ.ದರ್ಶಿತ್ ಅವರುಗಳನ್ನು ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕರವರು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್, ಆರ್‌ಎಂಓ ಡಾ.ವೆಂಕಟೇಶ್, ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಭಟ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.