ಕುಮಟಾ: ಪುರಸಭೆ ವತಿಯಿಂದ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬೀದಿ ವ್ಯಾಪಾರಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರ ನಡೆಯಿತು.
ಕಾರ್ಯಗಾರ ಉದ್ಘಾಟಿಸಿದ ಪುರಸಭೆ ಅಧ್ಯಕ್ಷೆ ಅನುರಾಧ ಬಾಳೇರಿ ಮಾತನಾಡಿ, ಬೀದಿ ವ್ಯಾಪಾರಿಗಳು ಪುರಸಭೆಯಿಂದ ನೀಡಲಾಗುವ ತರಬೇತಿ ಮತ್ತು ವಿವಿಧ ಯೋಜನೆಗಳ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿ ಅರುಣ ಕಾಶಿ ಭಟ್ ಅವರು ಬೀದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ಕುರಿತು ಮಾಹಿತಿ ನೀಡಿದರು. ಆರ್ಥಿಕ ಸಾಕ್ಷರತಾ ಸಮಾಲೋಚಕರಾದ ದೀಪಕ ಮೇಸ್ತಾ ಅವರು ಬೀದಿ ವ್ಯಾಪಾರಿಗಳಿಗೆ ದೊರೆಯುವ ವಿವಿಧ ವಿಮಾ ಸೌಲಭ್ಯ ಹಾಗೂ ಸಾಲ ಸೌಲಭ್ಯಗಳ ಕುರಿತು ವಿವರಿಸಿದರು.
ಗ್ರಾಮೀಣ ತರಭೇತಿ ಸಂಸ್ಥೆಯ ಗೌರೀಶ ನಾಯ್ಕ ಅವರು ವಿವಿಧ ತರಬೇತಿಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ ಪುರಸಭೆಯ ಪಿಎಂ ಸ್ವನಿಧಿ, ಸಾಲ ಸೌಲಭ್ಯ ಹಾಗೂ ಪ್ಲಾಸ್ಟಿಕ್ ನಿಷೇಧದ ಕುರಿತು ವಿವರಿಸಿದರು. ಈ ತರಬೇತಿಯಲ್ಲಿ 125ಕ್ಕೂ ಅಧಿಕ ವ್ಯಾಪಾರಸ್ಥರು ಭಾಗವಹಿಸುವ ಮೂಲಕ ಕಾರ್ಯಗಾರದ ಪ್ರಯೋಜನ ಪಡೆದರು.
ಕಾರ್ಯಗಾರದಲ್ಲಿ ಪುರಸಭೆಯ ಸಮುದಾಯ ಸಂಘಟಕಿ ಮೀನಾಕ್ಷಿ ಆಚಾರಿ ಸ್ವಾಗತಿಸಿ, ನಿರ್ವಹಿಸಿದರು. ಪುರಸಭೆ ಉಪಾಧ್ಯಕ್ಷೆ ಸುಮತಿ ಭಟ್, ಸ್ಥಾಯಿ ಸಮಿತಿ ಚೇರಮೆನ್ ಸುಶೀಲಾ ಗೋವಿಂದ ನಾಯ್ಕ, ವ್ಯವಸ್ಥಾಪಕಿ ಅನಿತಾ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕಿ ವೀಣಾ ಹರಿಕಂತ್ರ, ಕೃಷಿ ಅಧಿಕಾರಿ ವೆಂಕಟೇಶ ಬಿ ನಾಯ್ಕ, ಪಟ್ಟಣ ವ್ಯಾಪಾರ ಸಮಿತಿಯ ದಾಕ್ಷಾಯಿಣಿ ಅರಿಗ, ಗೀತಾ ನಾಯ್ಕ, ರವಿಶಂಕರ ಗುನಗಾ ಇತರರು ಉಪಸ್ಥಿತರಿದ್ದರು.