ಕುಮಟಾ: ತಾಲೂಕಿನ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಶಾಸಕ ದಿನಕರ ಶೆಟ್ಟಿ ರಸ್ತೆಗಳ ನಿರ್ಮಾಣ, ಉದ್ಘಾಟನೆ, ಅಂಗನವಾಡಿ ಕಟ್ಟಡದ ಲೋಕಾರ್ಪಣೆ, ಕಾಲೇಜು ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕತಗಾಲ, ಯಾಣ, ಬೆಳ್ಳಂಗಿ ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯ ಹಲವು ಭಾಗಗಳಲ್ಲಿ 80 ಲಕ್ಷ ರೂಪಾಯಿ ಸಿಮೆಂಟ್ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈಗಾಗಲೇ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಿಮೆಂಟ್ ರಸ್ತೆಗಳನ್ನು ಉದ್ಘಾಟಿಸಿದರು. ಯಾಣದಲ್ಲಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಅಳ್ಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ 150 ಕಾಲೇಜು ಮಕ್ಕಳಿಗೆ ಬ್ಯಾಗ್, ನೋಟ್‌ಬುಕ್ ವಿತರಿಸಿದರು.
ರಸ್ತೆ, ಅಂಗನವಾಡಿ ಕಟ್ಟಡ ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದ ಅವರು, ಯಾಣದ ಪವಿತ್ರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದೇವೆ. ಅಳ್ಕೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೋಟಿಗಟ್ಟಲೆ ಅಭಿವೃದ್ಧಿ ಅನುದಾನ ಸುರಿದಿದ್ದೇವೆ. ಸುಮಾರು 30 ಕೋಟಿ ಅನುದಾನ ಈ ಭಾಗದಲ್ಲಿ ವ್ಯಯಿಸಲಾಗಿದೆ. ಇದು ಬಹಳ ವಿಸ್ತೃತವಾದ ಪ್ರದೇಶ. ಹೀಗಾಗಿ ಎಷ್ಟೇ ಅಭಿವೃದ್ಧಿ ಅನುದಾನ ಹರಿಸಿದರೂ ಗೋಚರಿಸದು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿನ ಅನುದಾನ ನೀಡಲಿದ್ದಾರೆ. ಅದರಲ್ಲಿಯ ಅನುದಾನ ಈ ಭಾಗಕ್ಕೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಅಳ್ಕೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬಹಳಷ್ಟು ರಸ್ತೆಗಳು ಸುಧಾರಣೆ ಕಾಣಬೇಕಾಗಿದೆ. ಹಂತ ಹಂತವಾಗಿ ಎಲ್ಲಾ ರಸ್ತೆಗಳನ್ನು ಸುಧಾರಿಸಲಾಗುವದು. ಇಲ್ಲಿಯ ರಸ್ತೆಗಳ ಕಾಮಗಾರಿ ತುಂಬಾ ಉತ್ತಮ ಗುಣಮಟ್ಟದ್ದಾಗಿದೆ. ಎಲ್ಲಿಯೂ ಕಳಪೆ ಕಾಮಗಾರಿ ದೂರುಗಳು ಬಾರದಿರುವದು ಸಮಾಧಾನದ ಸಂಗತಿ. ಈ ಹಿಂದೆ ಈ ಭಾಗದಲ್ಲಿ ಶಾಲೆಗಳಿಗೆ ಮಕ್ಕಳ ಕೊರತೆಯಾಗುತ್ತಿತ್ತು. ಆದರೆ ಈಗ ಮಕ್ಕಳು ಹೆಚ್ಚನ ಸಂಖ್ಯೆಯಲ್ಲಿ ಬರುತ್ತಿರುವದು ಸಂತೋಷದ ಸಂಗತಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಉತ್ತಮ ಶಿಕ್ಷಣ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷೆ ಕೇಸರಿ ನಾಯ್ಕ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ತಾಲೂಕ ಪಂಚಾಯತ ಇಓ ನಾಗರತ್ನಾ ನಾಯ್ಕ, ಗ್ರಾ. ಪಂ. ಉಪಾಧ್ಯಕ್ಷ ಶ್ರೀಧರ ನಾಗೇಶ ಪೈ, ವಿನಾಯಕ ನಾಯಕ, ರಾಜ ಭಟ್ಟ, ದೇವು ಗೌಡ, ಸಿರಿ ಗೌಡ, ಶ್ರೀಕಾಂತ ನಾಯ್ಕ, ಉದಯ ಭಟ್ಟ, ಕಾರ್ತಿ ಭಟ್ಟ, ಯೊಗೇಶ ವಾರೇಕರ್, ವೆಂಕಟ್ರಮಣ ಮರಾಠಿ ಹಾಗೂ ಲ್ಯಾಂಡ್ ಆರ್ಮಿ, ಲೋಕೊಪಯೋಗಿ, ಜಿಲ್ಲಾ ಪಂಚಾಯತ ಇಂಜಿನಿಯರಿ0ಗ್, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.