Slide
Slide
Slide
previous arrow
next arrow

ಅಂಕಣಕಾರ ದಿನೇಶ ಅಮೀನಮಟ್ಟುಗೆ ಹರ್ಮನ್ ಮೊಗ್ಲಿಂಗ್-2022 ರಾಜ್ಯ ಮಟ್ಟದ ಪ್ರಶಸ್ತಿ

300x250 AD

ಕಾರವಾರ: ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಉತ್ತರಕನ್ನಡ ಜಿಲ್ಲಾ ಘಟಕ ಕೊಡಮಾಡುವ ಹರ್ಮನ್ ಮೊಗ್ಲಿಂಗ್ 2022ರ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮತ್ತು ಅಂಕಣಕಾರ ದಿನೇಶ ಅಮೀನಮಟ್ಟು ಅವರು ಆಯ್ಕೆಗೊಂಡಿದ್ದಾರೆಂದು ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ ತಿಳಿಸಿದ್ದಾರೆ.
ಪ್ರಶಸ್ತಿಯು ಹತ್ತು ಸಾವಿರ ರೂ.ನಗದು, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಜುಲೈ 30ರಂದು ಸಿದ್ದಾಪುರದ ಬಾಲಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಿನೇಶ ಅಮೀನಮಟ್ಟು ಅವರು ಕಳೆದ 39 ವರ್ಷಗಳಿಂದ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಿಕಾಂ, ಎಲ್‌ಎಲ್‌ಬಿ ಪದವೀಧರರಾಗಿರುವ ಅಮೀನಮಟ್ಟು, 1983ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸಂಪಾದಕತ್ವದ ‘ಮುಂಗಾರು’ ದಿನಪತ್ರಿಕೆಯ ಮೂಲಕ ವರದಿಗಾರರಾಗಿ, ಉಪಸಂಪಾದಕರಾಗಿ ಹಾಗೂ ಸುದ್ದಿಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 1989ರಿಂದ 2013ರವರೆಗೆ ಅತೀ ದೀರ್ಘಕಾಲ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಹಲವು ಜಿಲ್ಲಾ ವರದಿಗಾರರಾಗಿ, ಉಪಸಂಪಾದಕರಾಗಿ, ದೆಹಲಿ ಪ್ರತಿನಿಧಿಯಾಗಿ, ವಿಶೇಷ ವರದಿಗಾರರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
2013ರಿಂದ 2018ರವರೆಗೆ 5 ವರ್ಷಗಳ ಕಾಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿರುವ ಅವರು, 2002ರಲ್ಲಿ ನಡೆದ ಗುಜರಾತ್ ಕೋಮು ಗಲಭೆಯ ಪ್ರತ್ಯಕ್ಷ ವರದಿ, ಉತ್ತರ ಭಾರತ ರಾಜ್ಯಗಳಲ್ಲಿ ಸಂಚರಿಸಿ 2004 ಮತ್ತು 2009ರ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳ ಸಮೀಕ್ಷಾ ವರದಿ ನೀಡಿ ಜನಪ್ರಿಯರಾಗಿದ್ದಾರೆ. ಅಂಕಣ ಬರಹಗಾರರೂ ಆಗಿರುವ ದಿನೇಶ ಅಮೀನಮಟ್ಟು ಅವರು 2005ರಲ್ಲಿ ಬ್ರೂನೈ ದ್ವೀಪ ಮತ್ತು ಫಿಲಿಪೈನ್ಸ್ ದೇಶಗಳಿಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಜತೆಯಲ್ಲಿ ಶೃಂಗಸಭೆಯ ವರದಿಗಾಗಿ ಮಲೇಶಿಯಾ ದೇಶಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಕತಾರ್ ಮತ್ತು ಮಸ್ಕತ್ ದೇಶಗಳಿಗೆ ಮಾಧ್ಯಮ ಪ್ರತಿನಿಧಿಯಾಗಿ ಪ್ರವಾಸ ಕೈಗೊಂಡಿರುವ ಅವರು 2010ರಲ್ಲಿ ಜಿ-20 ದೇಶಗಳ ಸಮಾವೇಶದಲ್ಲಿ ಭಾಗವಹಿಸಲು ದಕ್ಷಿಣ ಕೋರಿಯಾಗೆ ಪ್ರವಾಸ ಕೈಗೊಂಡಿರುವ ಹೆಗ್ಗಳಿಕೆ ಇವರದು. ಅಮೀನಮಟ್ಟು ಅವರು ಮಾಜಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರರ ಸಮಿತಿ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಅಧ್ಯಯನ ಮಂಡಳಿ ಸದಸ್ಯರಾಗಿಯೂ ಅನುಪಮ ಸೇವೆ ಸಲ್ಲಿಸಿದ್ದಾರೆ.
ಇವರು ಮಾಧ್ಯಮ ಕ್ಷೇತ್ರಕ್ಕೆ ಸಲ್ಲಿಸಿರುವ ಗಣನೀಯ ಸೇವೆಗಾಗಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ ಮಾಧ್ಯಮ ಪ್ರಶಸ್ತಿ, ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ, ಜಿ.ಆರ್.ಪಾಂಡೇಶ್ವರ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರತ್ರಿಕೋದ್ಯಮ ಪ್ರಶಸ್ತಿ, ಬೋಧಿವರ್ಧನ ಪತ್ರಿಕೋದ್ಯಮ ಪ್ರಶಸ್ತಿ, ನಿಡುಮಾಮಿಡಿ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ದಿನೇಶ ಅಮೀನಮಟ್ಟು ಅವರ ಮಾಧ್ಯಮ ಕ್ಷೇತ್ರದ ಅನುಪಮ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಮನಮೋಹನ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top