ಕುಮಟಾ: ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಗಿಲ್ ಯುದ್ಧದ ಸಚಿತ್ರ ವರದಿಯನ್ನು ವಿದ್ಯಾರ್ಥಿಗಳು ವಿಡಿಯೋ ಮೂಲಕ ವೀಕ್ಷಿಸಿದರು. ಕಾರ್ಗಿಲ್ ಸಮಯದ ಸನ್ನಿವೇಶ ಹಾಗೂ ಭಾರತೀಯ ಗಡಿಭಾಗದ ನೈಜ ಸನ್ನಿವೇಶಗಳ ಕುರಿತಾಗಿ ಇರುವ ಡಾಕ್ಯುಮೆಂಟರಿ ಚಲನಚಿತ್ರವನ್ನು ವೀಕ್ಷಿಸಿದ ವಿದ್ಯಾರ್ಥಿಗಳು ಭಾರತೀಯ ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸಿ ಭಾವುಕರಾದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕ ಗೌರೀಶ ಭಂಡಾರಿ ಹಾಗೂ ಹರ್ಷ ಶಾಸ್ತ್ರಿ ನಿಜವಾದ ಭಾರತೀಯನಾದವನಿಗೆ ಈ ದಿನ ಮರೆಯಲು ಸಾಧ್ಯವಿಲ್ಲ. ಕಾರಣ ಇಂದು ಅದೆಷ್ಟೋ ವೀರ ಯೋಧರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಟ್ಟು, ತಾಯ್ನಾಡನ್ನು ದುಷ್ಟರ ಕೈಗಳಿಂದ ಮರಳಿ ಪಡೆದ ಸುದಿನ. ಭಾರತ ಸೇನೆ ಆಪರೇಷನ್ ವಿಜಯ್ ಮೂಲಕ ಪಾಕಿಸ್ತಾನದ ವಿರುದ್ಧ ಸಮರ ಸಾರಿ ಭಾರತದ ಭೂ ಭಾಗವನ್ನು ಕಾಪಾಡಿಕೊಂಡಿತ್ತು. ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಯುದ್ಧದಲ್ಲಿ ಹೋರಾಡಿ ವೀರ ಮರಣವನ್ನಪ್ಪಿದ ಸೈನಿಕರ ಕುರಿತಾಗಿಯೂ ವಿವರಣೆ ನೀಡಲಾಯಿತು.
ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯ ಮೂಲಕ ವೀರ ಸೇನಾನಿಗಳನ್ನು ಸ್ಮರಿಸಿದ್ದರು. ಶಿಕ್ಷಕ ಗಣೇಶ ಜೋಶಿ ವ್ಯವಸ್ಥಿತವಾಗಿ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು. ಮುಖ್ಯ ಶಿಕ್ಷಕರು ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.