ಶಿರಸಿ : ಬೇಡ್ತಿ – ವರದಾ ನದೀ ಜೋಡಣೆ ಯೋಜನೆಯನ್ನು ಸರ್ಕಾರ ಜಾರಿಮಾಡಲು ಮುಂದಾಗಿಲ್ಲ,ಡಿ.ಪಿ.ಆರ್.ಗೆ ಒಪ್ಪಿಗೆ ನೀಡಿಲ್ಲ,ವಿವರ ಯೋಜನಾ ವರದಿಯನ್ನು ಕೇಂದ್ರಕ್ಕೆ ಕಳಿಸಿಲ್ಲ, ಕೇಂದ್ರ ಸರ್ಕಾರ ಬೇಡ್ತಿ- ವರದಾ ಯೋಜನೆಗೆ ಅನುದಾನ ನೀಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಡ್ತಿ – ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಗೆ ತಿಳಿಸಿದ್ದಾರೆ.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಶ್ರೀ ಸೋಂದಾ ಸ್ವರ್ಣವಲ್ಲೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಮೇ – ಜೂನ್ 2022 ರಲ್ಲಿ ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನ ನಡೆಸಿ ಜೂನ್ 14 ರಂದು ಮಂಚಿಕೇರಿಯಲ್ಲಿ ಬೃಹತ್ ಜನ ಸಮಾವೇಶ ನಡೆಸಿತ್ತು. ಅನಂತರದಲ್ಲಿ ಬೇಡ್ತಿ ಸಮಿತಿಯ ಪದಾಧಿಕಾರಿಗಳು ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು, ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಹಾಗೂ ಜಲ ಅಭಿವೃದ್ಧಿ ಸಂಸ್ಥೆಯವರನ್ನು ಭೇಟಿ ಮಾಡಿದರು. ನೀರಾವರಿ ಇಲಾಖೆ ಬೇಡ್ತಿ – ವರದಾ ಯೋಜನೆ ಜಾರಿಗೆ ಸರ್ಕಾರ ಮುಂದಾಗಿಲ್ಲ ಎಂಬ ಮಾಹಿತಿ ನೀಡಿತು.
ಮಾನ್ಯ ವಿಧಾನ ಸಭಾಧ್ಯಕ್ಷರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ಬೇಡ್ತಿ ಸಮಿತಿಯ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿಗಳವರನ್ನು ಭೇಟಿ ಮಾಡಲು ದಿನಾಂಕ ನಿಶ್ಚಯವಾಗಿತ್ತು. ನೆರೆ ಹಾವಳಿ, ಭೂಕುಸಿತ, ನಿಸರ್ಗ ವಿಕೋಪ, ಮುಂತಾದ ಕಾರಣಗಳಿಂದ ನಿಯೋಗದ ಭೇಟಿ ರದ್ದಾಯಿತು.ಜು.08ರಂದು ಬೆಂಗಳೂರಿನಲ್ಲೇ ಇದ್ದ ಮಾನ್ಯ ವಿಧಾನ ಸಭಾಧ್ಯಕ್ಷರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರಿಗೆ ಬೇಡ್ತಿ–ವರದಾ ಯೋಜನೆಯ ದುಷ್ಪರಿಣಾಮಗಳು, ಬೇಡ್ತಿ ಸಮಿತಿಯ ಅಹವಾಲುಗಳು, ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನ, ಇತ್ಯಾದಿ ಕುರಿತು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.
ಪಶ್ಚಿಮ ಘಟ್ಟದಲ್ಲಿ ನದೀ ತಿರುವು ಯೋಜನೆಗಳಿಂದ ಆಗಿರುವ ಅರಣ್ಯನಾಶ, ಭೂಕುಸಿತ, ರೈತರು ಹಾಗೂ ಕರಾವಳಿಯ ಮೀನುಗಾರರ ಜೀವನದ ಮೇಲೆ ಉಂಟಾಗುವ ದುಷ್ಪರಿಣಾಮ, ವನ್ಯಜೀವಿ, ಅರಣ್ಯ ಹಾಗೂ ಜೀವವೈವಿಧ್ಯ ಕಾಯಿದೆಗಳ ಉಲ್ಲಂಘನೆ, ಎತ್ತಿನಹೊಳೆ ನೀರಾವರಿ ಯೋಜನೆಯ ವೈಫಲ್ಯ, ಬೇಡ್ತಿ ಕಣಿವೆಯಲ್ಲಿ ನೀರಿನ ಅಭಾವ, ಬೇಡ್ತಿ ಸಮಿತಿಯ ತಜ್ಞರ ವರದಿ, ಮುಂತಾದ ವಿವರಗಳನ್ನು ವಿಧಾನ ಸಭಾಧ್ಯಕ್ಷರು ಮುಖ್ಯಮಂತ್ರಿಗಳವರ ಗಮನಕ್ಕೆ ತಂದರು.
ಸಮಿತಿಯ ಗೌರವಾಧ್ಯಕ್ಷ ಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿ ಅವರ ಜೊತೆ ಸರ್ಕಾರದ ಈ ಭರವಸೆಗಳ ಬಗ್ಗೆ ಚರ್ಚಿಸಿ ಮುಂದಿನ ಕಾರ್ಯ ಚಟುವಟಿಕೆಗಳನ್ನು ಬೇಡ್ತಿ ಸಮಿತಿ ನಿರ್ಧರಿಸಲಿದೆ. ಮಂಚಿಕೇರಿಯ ಬೇಡ್ತಿ ಸಂರಕ್ಷಣಾ ಸಮಾವೇಶ ಕೈಗೊಂಡ ನಿರ್ಣಯಗಳಂತೆ ಗ್ರಾಮ ಪಂಚಾಯತಗಳು ಹಾಗೂ ಗ್ರ‍್ರಾಮ ಜೀವವೈವಿಧ್ಯ ಸಮಿತಿಗಳು, ರೈತ ಸಹಕಾರಿ ಸಂಘಗಳು, ಸಂಸ್ಥೆಗಳು ಕೈಗೊಂಡಿರುವ ನಿರ್ಣಯಗಳನ್ನು ಬೇಡ್ತಿ ಸಮಿತಿಗೆ ತಲುಪಿಸಬೇಕು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.