ಹಳಿಯಾಳ: ಜಗಲಬೇಟ ಗ್ರಾಮ ಪಂಚಾಯತ ವ್ಯಾಪ್ತಿಯ ದುರ್ಗಿ ಪ್ರಾಥಮಿಕ ಶಿಥಿಲಗೊಂಡ ಶಾಲೆಯ ಎರಡೂ ಕಟ್ಟಡಗಳು ಮಳೆಯಿಂದಾಗಿ ಇನ್ನೂ ಹೆಚ್ಚಿನ ಅಪಾಯದ ಸೂಚನೆ ನೀಡಿದೆ. ಸೋರಿಕೆಯಿಂದ ಶಾಲೆಯ ಕೊಠಡಿಯಲ್ಲಿ ನೀರು ತುಂಬಿಕೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಜಾಗವಿಲ್ಲದಂತಾಗಿದೆ. ಅದಲ್ಲದೇ ಶಾಲೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಕಟ್ಟಡ ಕುಸಿದು ಬೀಳುವ ಭೀತಿ ಎದುರಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಕಟ್ಟಡ ದುರಸ್ತಿವರೆಗೂ ಶಾಲೆಯಲ್ಲಿ ಕುಳಿತುಕೊಳ್ಳದಂತೆ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.
ದುರ್ಗಿಯಲ್ಲಿ 5ನೇ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಾಲೆ ಇದ್ದು, ಈ ಶಾಲೆಯಲ್ಲಿ ಸುಮಾರು 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದುರ್ಗಿ ಶಾಲೆಯಲ್ಲಿ ಎರಡು ಶಾಲಾ ಕಟ್ಟಡಗಳಿದ್ದು, ಒಂದು ಕಟ್ಟಡಕ್ಕೆ ಸ್ಲಾಬ್ ಮೇಲ್ಬಾವಣಿ ಇದ್ದರೆ ಇನ್ನೊಂದು ಕಟ್ಟಡ ಶೀಟ್ ಛಾವಣಿಯನ್ನು ಹೊಂದಿದೆ. ಆದರೆ ಎರಡೂ ಕಟ್ಟಡಗಳು ತೀರಾ ಅಪಾಯಕಾರಿಯಾಗಿದ್ದು, ಸಂಪೂರ್ಣ ಶಿಥಿಲಗೊಂಡಿವೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೇ, ಶಾಲೆಯ ಶುರುವಿನಿಂದಲೇ ಅಭ್ಯಾಸ ವಂಚಿತರಾಗಿದ್ದಾರೆ.