ಹಳಿಯಾಳ: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆ ಮತ್ತು ನೆರೆಹಾವಳಿಯಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ರೈತರಿಗೆ ಹಾಗೂ ನಿರಾಶ್ರಿತರಿಗೆ ಹೆಚ್ಚಿನ ಪರಿಹಾರ ನೀಡಿ ಸರ್ಕಾರ ನೆರವಿಗೆ ಧಾವಿಸಬೇಕಾಗಿದೆ ಎಂದು ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.
ಮಳೆ ಹಾಗೂ ನೆರೆ ಹಾವಳಿಯಿಂದ ಸಾರ್ವಜನಿಕ ಮತ್ತು ಸರಕಾರಿ ಆಸ್ತಿ- ಪಾಸ್ತಿಗಳಿಗೆ ಸಾಕಷ್ಟು ಹಾನಿಯಾಗಿದೆ. ಜೀವಹಾನಿಯೂ ಸಂಭವಿಸಿರುತ್ತವೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ವಾಸಿಸುವ ಮನೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದು, ಸಾಕಷ್ಟು ಮನೆಗಳು ಸಂಪೂರ್ಣ ಅಥವಾ ಭಾಗಶಃ ಹಾನಿಗೊಳಗಾಗಿದೆ. ರಾಜ್ಯದಲ್ಲಿ ಅನೇಕ ಜೀವಹಾನಿಯಾಗಿರುವ ಉದಾಹರಣೆಗಳೂ ಸಹ ಇವೆ. ಹಲವಾರು ವಿವಿಧ ಕಡೆಗಳಲ್ಲಿ ಗುಡ್ಡಗಳು ಕುಸಿತವಾಗಿ, ಅಲ್ಲಲ್ಲಿ ಜನಸಂಪರ್ಕವು ಕೂಡ ಕಡಿತಗೊಂಡಿದೆ. ಸಾಕಷ್ಟು ಪ್ರಮಾಣದಲ್ಲಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳು ಭಾಗಶಃ ಹಾಳಾಗಿದ್ದು, ಅವರ ಪುನರ್ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ನದಿ ತಟಗಳ ಪ್ರದೇಶದಲ್ಲಿ ವಾಸಿಸುವ ಮನೆಗಳಿಗೆ ನೀರು ನುಗ್ಗಿದ್ದು, ಹಲವಾರು ಮನೆಗಳು ಜಲಾವೃತವಾಗಿದ್ದವು. ಕೆಲವೆಡೆ ಮನೆಗಳು ಕುಸಿದಿದ್ದು, ಜೀವನಾವಶ್ಯಕ ಸಾಮಗ್ರಿಗಳು ನೀರು ಪಾಲಾಗಿರುತ್ತವೆ. ಅಲ್ಲದೇ, ನದಿಗಳ ಅಕ್ಕ-ಪಕ್ಕದಲ್ಲಿರುವ ಜಮೀನುಗಳಿಗೆ ನೀರು ಹರಿದ ಪರಿಣಾಮವಾಗಿ ಭತ್ತ, ಕಬ್ಬು, ಹಾಗೂ ತೋಟಗಾರಿಕಾ ಬೆಳೆಗಳಾದ ಬಾಳೆ, ತೆಂಗು, ಅಡಿಕೆ ತೋಟಗಳಿಗೆ ಸಾಕಷ್ಟು ಹಾನಿಯಾಗಿದೆ. ರೈತರ ದನದ ಕೊಟ್ಟಿಗೆಗಳಲ್ಲಿರುವ ಕೃಷಿ ಉಪಕರಣಗಳು, ಪಂಪಸೆಟ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುತ್ತವೆ. ಇದರಿಂದ ರೈತರಿಗೆ ಬಹಳಷ್ಟು ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಭಾರೀ ಮಳೆಯಿಂದ ತತ್ತರಿಸಿ, ರಾಜ್ಯದಲ್ಲಿ ಹಾನಿಗೊಳಗಾದ ರಸ್ತೆಗಳು, ಸೇತುವೆಗಳು, ವಿದ್ಯುತ್ ಮಾರ್ಗಗಳು ಮತ್ತು ಇತರ ಮೂಲಸೌಕರ್ಯಗಳ ದುರಸ್ತಿ ಮತ್ತು ಮರುಸ್ಥಾಪನೆಗಾಗಿ ಮುಖ್ಯಮಂತ್ರಿಗಳು ರೂ.500 ಕೋಟಿಗಳನ್ನು ಮಂಜೂರು ಮಾಡಿದ್ದಾರೆ. ಆದರೆ ಭಾರೀ ಮಳೆ ಹಾಗೂ ನೆರೆಯಿಂದ ಬಹಳಷ್ಟು ಹಾನಿಯಾಗಿದ್ದು, ಈಗ ಮಂಜೂರು ಮಾಡಿರುವ ರೂ.500 ಕೋಟಿಗಳ ಮೊತ್ತ ಸಾಕಾಗುವುದಿಲ್ಲ. ಹೀಗಾಗಿ ಹೆಚ್ಚಿನ ಅನುದಾನ ಮಂಜೂರು ಮಾಡಿ, ಶೀಘ್ರವಾಗಿ ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ. ಅಲ್ಲದೇ, ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಅವರು ಮನವಿ ಮಾಡಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.