ಭಟ್ಕಳ್ :ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ವತಿಯಿಂದ ತಾಲೂಕಾ ಸ್ವಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶ್ರೀಶಾಂತೇರಿ ಕಾಮಾಕ್ಷಿ ಸಭಾಗೃಹದಲ್ಲಿ ಜರುಗಿತು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿ.ಎಸ್.ಎಸ್ ಅಧ್ಯಕ್ಷ ಕಲ್ಲೇಶ ಪೈ, ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಶಿಕ್ಷಣ ಕ್ಷೇತ್ರಕ್ಕೆ ದಾನಿಗಳ ಕೊಡುಗೆಯ ಕುರಿತು ಹೇಳಿದರು.ಸಂಪನ್ಮೂಲ ವ್ಯಕ್ತಿಗಳಾದ ಆಹಾರ ಸಂಸ್ಕರಣಾ ಹಾಗೂ ಗುಣಮಟ್ಟ ನಿರ್ವಹಣಾ ಪದವೀಧರ, ಭಟ್ಕಳದ ಎಲ್‌ಎನ್‌ಆರ್ ಮಿಲ್ಪ ಪವನ ಪೈ, ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪುರಸ್ಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಏಳ್ಗೆ ಪಾಲಕರ ಶ್ರಮ ಹಾಗೂ ಲಭ್ಯವಿರುವ ಪ್ರಚಲಿತ ಶೈಕ್ಷಣಿಕ ಕೋರ್ಸಗಳ ಬಗ್ಗೆ, ವಿಶೇಷವಾಗಿ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿನ ವಿಫುಲ ಅವಕಾಶಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.
ಆಹಾರ ಕ್ಷೇತ್ರದ ವಿಶೇಷ ಸಾಧನೆಗಾಗಿ ಪವನ ಪದ್ಮನಾಭ ಪೈ ರವರಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ನರೇಂದ್ರ ನಾಯಕ ಮಾತನಾಡಿ ನೂತನ ಶಿಕ್ಷಣ ನೀತಿಯ ಪ್ರಯೋಜನವನ್ನು ಉಲ್ಲೇಖಿಸುತ್ತಾ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನಬೆಳೆಸಿಕೊಳ್ಳುವಂತೆ ತಿಳಿಸಿದರು. ಭಟ್ಕಳ ಜಿ. ಎಸ್. ಬಿ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತರವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಕೊಂಡಾಡಿದರು. ವಿದ್ಯಾರ್ಥಿಗಳ ಸರ್ವತೋಮುಖ ಏಳೆಗೆ ತನು-ಮನ-ಧನ ಸಹಕಾರಕ್ಕೆ ಸಮಾಜವು ಸದಾಸಿದ್ಧ ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಪದ್ಮನಾಭ ಪೈ, ಗಣಪತಿ ಪ್ರಭು, ನಾಗೇಶ ಪೈ, ಮಂಜುನಾಥ ಪ್ರಭು, ಪ್ರಸನ್ನ ಪ್ರಭು ರಾಮು ಕಾಮತ, ಬಾಬಾನಂದ ಪೈ ಸಹಿತ ಪಾಲಕ ಪೋಷಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀನಾಥ ಪೈ ಸ್ವಾಗತಿಸಿದರು, ಸಹಕಾರ್ಯದರ್ಶಿ ಗುರುದಾಸ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು