ಹೊನ್ನಾವರ: ತಾಲೂಕಿನ ವಲ್ಕಿ ಗ್ರಾಮದಲ್ಲಿ ಹತ್ತಾರು ಮನೆಗಳಿಗೆ ನುಗ್ಗಿದ ಮಳೆ ನೀರು ಅಲ್ಲಿನ ಗ್ರಾಮಸ್ಥರನ್ನು ಹೈರಾಣಾಗಿಸಿದ್ದು, ಮಳೆ ಪ್ರಭಾವಿತ ಸ್ಥಳಗಳಿಗೆ ಭೇಟಿ ನೀಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ನೇತೃತ್ವದ ನಿಯೋಗದ ಮುಂದೆ ಅಲ್ಲಿನ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದು ಇಲ್ಲಿ ಕಾಳಜಿ ಕೇಂದ್ರಕ್ಕೂ ಗತಿ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ಸಮಸ್ಯೆಯನ್ನು ವಲ್ಕಿ ಗ್ರಾಮದ ವಲ್ಕಿ ಕೇರಿಯ ಸಂತೃಸ್ತರೊಬ್ಬರು, ಇಲ್ಲಿ ಪ್ರತಿ ವರ್ಷ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಇಲ್ಲಿನ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಲು ಸರ್ಕಾರ ಮುಂದೆ ಬರಬೇಕಿದೆ. ಮಳೆ ಬಂದಾಗ ನೀರು ಮನೆಯನ್ನು ತುಂಬಿಕೊಳ್ಳುತ್ತದೆ. ನಾವು ಒಂದೋ ಇಲ್ಲಿ ಉಳಿದುಕೊಳ್ಳಬೇಕು ಇಲ್ಲದಿದ್ದರೆ ಮನೆ ಬಿಟ್ಟು ಹೋಗಬೇಕು. ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ದೂರಿಕೊಂಡರು. ನಾತಕೇರಿ ಮಡಗಿಹಿತ್ತು ನಿವಾಸಿಯೊಬ್ಬರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದು ‘ನಮಗೆ ಮಳೆಯಿಂದಾಗಿ ಇಲ್ಲಿನ ರಸ್ತೆಗಳು ಹಾಳಾಗುತ್ತಿದೆ. ನೀರು ತುಂಬಿಕೊಂಡು ಸಂಚಾರಕ್ಕು ಕೂಡ ಕಷ್ಟವಾಗುತ್ತಿದೆ. ಮನೆಯೊಳಗೆ ನೀರು ಸಹ ತುಂಬಿಕೊಳ್ಳುತ್ತದೆ.ನಮಗೆ ಯಾವುದೇ ಪರಿಹಾರ ದೊರೆಯುತ್ತಿಲ್ಲ. ಕಾಳಜಿ ಕೇಂದ್ರದಲ್ಲಿ ಊಟ ಬಿಟ್ಟರೆ ಬೇರೆನೂ ಸಿಗದು ಬೇಸರ ವ್ಯಕ್ತಪಡಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನ್ಯಾಯಾವಾದಿ ತಾಹೀರ್ ಹುಸೇನ್, ಹೊನ್ನಾವರ ತಾಲೂಕಿನ ಖರ್ವಾ ಗ್ರಾ. ಪಂ ವ್ಯಾಪ್ತಿಯ ವಳ್ಳಿ ಗ್ರಾಮ ಪ್ರತಿ ವರ್ಷ ನೀರು ತುಂಬಿಕೊಂಡು ಜನವಾಸಕ್ಕೆ ತೊಂದರೆಯಾಗುತ್ತಿದೆ. ಇಲ್ಲಿನ ಸ್ಥಳಿಯ ಶಾಸಕರು ಇತ್ತಕಡೆ ತಮ್ಮ ಗಮನ ಹರಿಸುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ. ಈ ನಿಟ್ಟಿನಲ್ಲಿ ತಾಲೂಕಾಡಳಿತ ಹಾಗೂ ಶಾಸಕರು ಈ ಗ್ರಾಮಕ್ಕೆ ಒಮ್ಮೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಕ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಝೀಝ್ ಜಾಗದ್ದಾರ್ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.