ಕಾರವಾರ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರದ ಆದೇಶದಂತೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದ್ದು, ಜುಲೈ 24ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಕ್ರೀಡೆಗಳಿಗೆ ಉತ್ತೇಜನ ನೀಡಲು ಪ್ರಮುಖವಾಗಿ ಕಬಡ್ಡಿ, ಖೋಖೋ, ಕುಸ್ತಿ, ಎತ್ತಿನ ಗಾಡಿ/ ಕಂಬಳ ಕ್ರೀಡೆಯನ್ನು ಜಿಲ್ಲಾದ್ಯಂತ ಆಯೋಜಿಸಲಾಗುತ್ತಿದೆ.
ಜುಲೈ 24ರವರೆಗೆ ಗ್ರಾಮೀಣ ಪ್ರದೇಶದ ಪುರುಷ ಹಾಗೂ ಮಹಿಳೆಯರ ತಂಡಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ತಮ್ಮಗ್ರಾಮ ಪಂಚಾಯತಿ ಪಿಡಿಒ ಮೂಲಕ ಸಂಬಂಧಿಸಿದ ತಾಲೂಕಿನ ಯುವಸಬಲೀಕರಣ ಹಾಗೂ
ಕ್ರೀಡಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಗಸ್ಟ್ 9, 10ರಂದು ಶಿರಸಿಯ ಜಿಲ್ಲಾ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ತಂಡಗಳು ರಾಜ್ಯಮಟ್ಟದಲ್ಲಿ ಭಾಗವಹಿಸುವ ಅರ್ಹತೆ ಪಡೆಯಲಿದೆ. ಈ ಗ್ರಾಮೀಣ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯ ತಂಡಗಳು ಭಾಗವಹಿಸುವಂತೆ ಪ್ರವೀಣಕುಮಾರ್ ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 7349514924 ಗೆ ಸಂಪರ್ಕಿಸಬಹುದಾಗಿದೆ.