ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಜು.18 ಸೋಮವಾರ ಧಾತ್ರಿ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಉಚಿತವಾಗಿ ಪಟ್ಟಿ ವಿತರಣೆ ಮಾಡಲಾಯಿತು.
ಧಾತ್ರಿ ಫೌಂಡೇಶನ್ನಿನ ಶ್ರೀನಿವಾಸ ಭಟ್ಟ ಮಾತನಾಡಿ ಸಮಾಜದ ಋಣ ತೀರಿಸುವ ಅವಕಾಶ ಎಲ್ಲರ ಜೀವನದಲ್ಲೂ ಬರುವುದು. ಅದನ್ನು ಬಳಸಿ ಕೊಳ್ಳಬೇಕು ಎಂದರು. ಸೂರ್ಯನಾರಾಯಣ ಪ್ರೌಢ ಶಾಲೆ ವಿದ್ಯಾರ್ಥಿನಿ SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗ್ರಾಮೀಣ ಶಾಲೆಯಲ್ಲಿ ಓದುವ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ, ಇಲ್ಲಿನ ಶಾಲೆಯ ಶಿಕ್ಷಕರು ಉತ್ತಮ ಮಾರ್ಗ ದರ್ಶನ ಮಾಡುತ್ತಾರೆ ಎನ್ನುವುದನ್ನೂ ಸಾಬೀತು ಪಡಿಸಿದ್ದಾರೆ. ಕಾರಣ ನೀವು ಉತ್ತಮ ವಾಗಿ ಅಭ್ಯಾಸ ಮಾಡಿ ಎಂದರು.
ವಿದ್ಯಾ ಸಂಸ್ಥೆ ಯ ನಿರ್ದೇಶಕರಾದ ಜಿ.ಕೆ.ಹೆಗಡೆ ಮಾತನಾಡಿ ಈ ತರಹದ ಸೇವೆ ಮಾಡುವ ಶಕ್ತಿ ಹೆಚ್ಚಲಿ ಹಾಗೂ ನಮ್ಮ ಶಾಲೆಯ ಮಕ್ಕಳು ಈ ತರದ ಸೌಲಭ್ಯ ಬಳಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು ಎಂದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ನಾಯ್ಕ, ಉಪಾಧ್ಯಕ್ಷ ನರೇಂದ್ರ ಶಾಸ್ತ್ರಿ, ಸದಸ್ಯ ಗೋಪಾಲ ಪಟಗಾರ, ವಿದ್ಯಾಧರ ಭಟ್ಟ ಇದ್ದರು. ಪ್ರಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಗಣೇಶ ಭಟ್ಟ ವಾನಳ್ಳಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಲೋಕನಾಥ್ ನಿರ್ವಹಿಸಿದರೆ ಶಿಕ್ಷಕ ಪ್ರಸಾದ ಹೆಗಡೆ ವಂದಿಸಿದರು.