ಕಾರವಾರ: ಕದ್ರಾ ಜಲಾಶಯ ವ್ಯಾಪ್ತಿಯ ಹತ್ತಾರು ಗ್ರಾಮಗಳು ಪ್ರತಿವರ್ಷದ ನೆರೆಯಿಂದಾಗಿ ಮುಳುಗಡೆಯಾಗುತ್ತಿದ್ದು, ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವ ಕಾರ್ಯ ಜಿಲ್ಲಾಡಳಿತದಿಂದಾಗಲಿ, ಸರ್ಕಾರದಿಂದಾಗಲಿ ಈವರೆಗೆ ಆಗಿಲ್ಲ ಎಂದು ಕದ್ರಾ ಅಣೆಕಟ್ಟು ನೆರೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಉದಯ್ ನಾಯ್ಕ ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ರಾ ಸೇರಿದಂತೆ ಜಿಲ್ಲೆಯ ಎಲ್ಲಾ ಅಣೆಕಟ್ಟುಗಳಲ್ಲೂ ಕಾಲು ಭಾಗದಷ್ಟು ಹೂಳು ತುಂಬಿಕೊಂಡಿದೆ. ಇದರಿಂದಾಗಿ ಪ್ರತಿ ಮಳೆಗಾಲದಲ್ಲೂ ಕಡಿಮೆ ಮಳೆಯಾದರೂ ಜಲಾಶಯಗಳು ಭರ್ತಿಯಾಗುತ್ತಿದ್ದು, ನೀರನ್ನು ಹೊರಬಿಟ್ಟು ಸುತ್ತಲಿನ ಗ್ರಾಮಗಳನ್ನು ಮುಳುಗಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೆಪಿಸಿಯವರು ನೀರು ಬಿಡುವ ಮುನ್ನ ಸಾರ್ವಜನಿಕರು ತಮ್ಮ ಸಾಮಾನು- ಸರಂಜಾಮು, ಜಾನುವಾರುಗಳನ್ನು ಕರೆದುಕೊಂಡು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಏಕಾಏಕಿ ಸೂಚಿಸುತ್ತಾರೆ. ಸುರಕ್ಷಿತ ಸ್ಥಳವೆಂದರೆ ಸಂತ್ರಸ್ತರು ಎಲ್ಲಿ ಸ್ಥಳಾಂತರವಾಗಬೇಕು? ಕಳೆದ ವರ್ಷದ ನೆರೆಯಿಂದ ಮನೆ ಕಳೆದುಕೊಂಡವರಿಗೆ ಈವರೆಗೆ ಕೇವಲ ಒಂದೇ ಕಂತು ಪರಿಹಾರ ಬಂದಿದೆಯೇ ಹೊರತು ಅದರ ನಂತರ ಬಿಡಿಗಾಸು ಕೂಡ ಬಂದಿಲ್ಲ. ಮನೆ ಕಟ್ಟಿಕೊಳ್ಳುವಾಗಲೇ ಮತ್ತೆ ನೆರೆ ಬಂದು ಸಂತ್ರಸ್ತರ ಜೀವನ ನಡುಬೀದಿಗೆ ಬಂದಿದೆ. ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಸಂತ್ರಸ್ತರಿಗೆ ಶಾಶ್ವತ ಜಾಗ ನೀಡಿ ಸೂರು ನೀಡುವ ಬಗ್ಗೆ ಈವರೆಗೆ ಕ್ರಮ ಕೈಗೊಳ್ಳದೆ ಮೀನಾಮೇಷ ಎಣಿಸುತ್ತಿದ್ದು, ಶೀಘ್ರವೇ ಈ ಕಾರ್ಯ ಅನುಷ್ಠಾನಕ್ಕೆ ಬರಬೇಕಿದೆ ಎಂದು ಆಗ್ರಹಿಸಿದರು.
ಕದ್ರಾ ಜಲಾಶಯದಿಂದ ನೀರು ಬಿಡುವುದರಿಂದ ಕೋಡಿಬಾಗದವರೆಗಿನ ಪ್ರದೇಶಗಳು ಮುಳುಗಡೆಯಾಗುತ್ತಿದೆ. ಪ್ರತಿವರ್ಷ ಇದು ಮರುಕಳಿಸುತ್ತಿರುವುದರಿಂದ ಈ ಭಾಗದ ಜನತೆ ಗದ್ದೆ- ತೋಟಗಳನ್ನು ಮಾಡುವುದನ್ನೂ ಬಿಟ್ಟಿದ್ದಾರೆ. ಅಲ್ಲದೇ ಜಿಲ್ಲಾಡಳಿತ ಪ್ರವಾಹ ಪೀಡಿತವಾಗಬಹುದಾದ ಪ್ರದೇಶಗಳೆಂದು ಸೂಚನಾ ಫಲಕಗಳನ್ನು ಅಳವಡಿಸಿರುವುದು ಅವೈಜ್ಞಾನಿಕ ಹಾಗೂ ಅದರಿಂದಾಗಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಶೋಕ್, ಅಶ್ವಿನಿ ಪೆಡ್ನೇಕರ್, ಚಂದಾ ನಾಯ್ಕ, ರೋಹಿದಾಸ್ ವೈಂಗಣಕರ್, ಗುರುದಾಸ್ ಶೇಟ್, ಸಂದೀಪ್ ಕಲ್ಗುಟ್ಕರ್, ಪ್ರಸಾದ್ ಆಚಾರಿ, ನಾಗೇಶ್ ಭವಾನಕರ್, ರಾಜೇಂದ್ರ ಮಾಳ್ಸೇಕರ್ ಇದ್ದರು.