ಕಾರವಾರ: ಸರ್ಕಾರಿ ಕಚೇರಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದಕ್ಕೆ ನಿಷೇಧ ಹೇರಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ ಅಥವಾ ವಿಡಿಯೋ ಮಾಡದಂತೆ ಸರ್ಕಾರ ನಿರ್ಬಂಧ ವಿಧಿಸಿದೆ.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿದೆ. ತಮ್ಮ ತಮ್ಮ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಆಗಮಿಸುತ್ತಾರೆ. ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಬಂದು ಕಚೇರಿಯ ಫೋಟೋ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಹಾಗೂ ಇಂತಹ ಫೋಟೋ, ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಇಲಾಖೆ, ಸರ್ಕಾರದ ಘನತೆಗೆ ಕುಂದುಂಟಾಗುತ್ತದೆ.
ಹಾಗೆಯೇ ಅದರಲ್ಲೂ ಮಹಿಳಾ ನೌಕರರಿಗೆ ಸಮಸ್ಯೆ ಉಂಟಾಗುತ್ತಿದ್ದು, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಮಾಡದಂತೆ ಸರ್ಕಾರಕ್ಕೆ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡದಂತೆ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದ ವಿರುದ್ಧ ಸಾರ್ವಜನಿಕರು ಗರಂ; ಸರ್ಕಾರಿ ಕಚೇರಿಯಲ್ಲಿ ಫೋಟೋ, ವಿಡಿಯೋ ಮಾಡದಂತೆ ಸರ್ಕಾರ ಆದೇಶ ಹೊರಡಿಸಿರುವುದು ರಾಜ್ಯ ಸರ್ಕಾರಕ್ಕೆ ಪಾರದರ್ಶಕ ಆಡಳಿತ ಬೇಡವೇ, ಭ್ರಷ್ಟರ ಬೆನ್ನಿಗೆ ಸರ್ಕಾರ ನಿಂತಿದೆಯೇ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಚಿತ್ರೀಕರಣ ಮಾಡುವುದರಿಂದ ಹಲವು ಭ್ರಷ್ಟಾಚಾರ ಪ್ರಕರಣಗಳು ಹೊರಬಂದಿದೆ. ಈ ಹಿಂದೆ ವಿಧಾನಸಭಾ ಕಲಾಪದಲ್ಲಿ ವಿಡಿಯೋ ಚಿತ್ರೀಕರಣವನ್ನ ನಿಷೇದ ಮಾಡಿತ್ತು. ಇದೀಗ ಸರ್ಕಾರಿ ಕಚೇರಿಯಲ್ಲಿ ನಡೆಯುವ ಹುಳುಕನ್ನ ಮುಚ್ಚಿಕೊಳ್ಳಲು ಆದೇಶ ಮಾಡಿದ್ದು, ಭ್ರಷ್ಟರ ಪರ ಸರ್ಕಾರ ನಿಂತಿದೆ ಎಂದು ಸಾರ್ವಜನಿಕರ ವಲಯದಲ್ಲಿ ಆಕ್ರೋಶ ಹೊರಹಾಕಿದೆ.
ಪಾರದರ್ಶಕ ಆಡಳಿತ ನಡೆಸಬೇಕಾದರೆ ವಿಡಿಯೋ ಚಿತ್ರೀಕರಣ ಮಾಡಿದರೆ, ಫೋಟೋ ತೆಗೆದರೆ ಏನು ಸಮಸ್ಯೆಯಿದೆ. ಕಚೇರಿಯಲ್ಲಿ ಸಿಸಿಟಿವಿ ಅಳವಡಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋರ್ಟ್ ಕಲಾಪವನ್ನೇ ನ್ಯಾಯಾಲಯ ಲೈವ್ ನೀಡುತ್ತಿದ್ದು, ಸರ್ಕಾರಕ್ಕೆ ಹೆದರಿಕೆ ಏಕಿದೆ. ಈ ಆದೇಶ ಹೊರಡಿಸಲು ಕಾರಣವಾದರು ಏನು, ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಸರ್ಕಾರ ಬೆಂಬಲ ಕೊಡಲು ಇಂತಹ ಆದೇಶಕ್ಕೆ ಮುಂದಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಕ್ಯಾಮೆರಾಗೆ ಏಕೆ ಭಯ ಪಡಬೇಕು. ಪ್ರಜೆಗಳನ್ನ ಪ್ರಶ್ನಿಸುವ ಅಧಿಕಾರವನ್ನ ಈ ಆದೇಶ ಕಿತ್ತುಕೊಂಡಂತಿದೆ. ಒಂದೊಮ್ಮೆ ಅನವಶ್ಯಕವಾಗಿ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿದರೆ ಪೊಲೀಸರ ಮೊರೆ ಹೋಗಿ ಅಂತವರಿಗೆ ಶಿಕ್ಷೆ ಕೊಡಲಿ. ಅದನ್ನ ಬಿಟ್ಟು ವಿಡಿಯೋ, ಫೋಟೋವನ್ನ ಮಾಡಬಾರದು ಎಂದು ನಿಷೇದ ಹೇರುವುದು ಸರಿಯಾದ ಕ್ರಮವಲ್ಲ ಎಂದು ಟೀಕೆಗಳು ಕೇಳಿ ಬಂದಿದೆ.
ಇನ್ನು ಸರ್ಕಾರದ ಈ ಆದೇಶ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದ್ದು ಆಡಳಿತರೂಡ ಬಿಜೆಪಿ ವಿರುದ್ದ ವಿರೋಧ ಪಕ್ಷದ ನಾಯಕರುಗಳು ಟೀಕೆಗಳನ್ನ ಮಾಡಲು ಪ್ರಾರಂಭಿಸಿದ್ದಾರೆ. ಸರ್ಕಾರದ ಈ ಆದೇಶದ ವಿರುದ್ಧ ವಿರೋಧ ಪಕ್ಷದ ನಾಯಕರು ಇನ್ನಷ್ಟು ಪ್ರತಿಭಟಿಸುವ ಸಾಧ್ಯತೆ ಸಹ ಇದೆ ಎನ್ನಲಾಗಿದ್ದು ಸರ್ಕಾರ ಇದು ಮುಜುಗರವನ್ನ ಉಂಟು ಮಾಡಲಿದೆ ಎಂದು ಬಿಜೆಪಿ ಪಕ್ಷದ ನಾಯಕರೇ ಮಾತನಾಡಿಕೊಳ್ಳುವಂತಾಗಿದೆ.