ಯಲ್ಲಾಪುರ; ಡೊಂಗಿ ಪರಿಸರವಾದಿಗಳಿಂದಾಗಿ ಶತಮಾನದ ಕನಸಾದ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ನೆನೆಗುದಿಗೆ ಬಿದ್ದಿದ್ದು, ಯೋಜನೆ ಶೀಘ್ರ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಪ್ರಬಲ ಇಚ್ಛಾಶಕ್ತಿ ತೋರಿ ಕಾರ್ಯಪ್ರವೃತ್ತರಾಗಬೇಕೆಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆಗ್ರಹಿಸಿದ್ದಾರೆ.
ಅವರು ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಜಿಲ್ಲೆಯ ಕರಾವಳಿಯ ಎಲ್ಲ ತಾಲೂಕುಗಳೂ ರೈಲ್ವೆ ಸೌಲಭ್ಯ ಹೊಂದಿದೆ. ಘಟ್ಟದ ಮೇಲಿನ ಶಿರಸಿ ಸಿದ್ದಾಪುರ ತಾಳಗುಪ್ಪಾ ಯೋಜನೆಯಿಂದ ರೈಲ್ವೆ ಸೌಲಭ್ಯ ಪಡೆಯಲಿದೆ. ಮುಂದೊಂದು ದಿನ ಯಲ್ಲಾಪುರ ಮಾತ್ರ ರೈಲು ಸೌಲಭ್ಯದಿಂದ ವಂಚಿತವಾಗುವ ಅಪಾಯ ಇದೆ. ಹುಬ್ಬಳ್ಳಿ ಅಂಕೋಲಾ ಜೋಡಿಸುವ ಎರಡೂ ಕಡೆ ರೈಲು ಇದ್ದು,ಯೋಜನೆ ಕಾರ್ಯಗತವಾದರೆ, ಯಲ್ಲಾಪುರ ಭಾಗಕ್ಕೆ ಕರಾವಳಿ,ಬಯಲು ಸೀಮೆ ಸಂಪರ್ಕ ಸಾಧ್ಯವಾಗುತ್ತದೆ. ಉಳಿದೆಲ್ಲ ಕಡೆ ರೈಲು ಅಥವಾ ಚತುಷ್ಪತಕ್ಕೆ ಪರಿಸರ ಅಡ್ಡಿ ಬರದು. ಕೇವಲ ಯಲ್ಲಾಪುರ ಭಾಗದಲ್ಲಿ ರೈಲು ಯೋಜನೆ ಆಗುತ್ತದೆ ಎಂತಾದರೆ,ನಿದ್ದೆಯಲ್ಲಿದ್ದ ಡೊಂಗಿ ಪರಿಸರವಾದಿಗಳು ಮೈಕೊಡವಿ ನಿಲ್ಲುತ್ತಾರೆ. ಪದೆ ಪದೆ ನ್ಯಾಯಾಲಯದಲ್ಲಿ ತಡೆ ತಂದು ವಿಘ್ನಸಂತೋಷ ಅನುಭವಿಸುತ್ತಿದ್ದಾರೆ.ಅರಣ್ಯ ಪರಿಸರ ರಾಜ್ಯದಲ್ಲಿ ಯಲ್ಲಾಪುರ ಭಾಗದಲ್ಲಿ ಅಭಿವೃದ್ದಿಗೆ ಮಾತ್ರ ಅಡ್ಡಿಯಾಗುತ್ತಿದೆ.ಉಳಿದೆಡೆ ಯೊಜನೆಗಳಿಂದ ಅರಣ್ಯ ಪರಿಸರ ಹಾನಿ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಯಲ್ಲಾಪುರದ ಮೂಲಕ ಹಾದು ಹೋಗಲಿರುವ ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆಗೆ ಎರಡು ದಶಕಗಳ ಹಿಂದೆ ಅಂದಿನ ಪ್ರಧಾನಿ ವಾಜಪೇಯಿ ಶಂಕುಸ್ಥಾಪನೆ ನೆರವೇರಿಸಿದ್ದರು. ಕಲಘಟಗಿಯವರೆಗೆ ರೈಲು ಯೋಜನೆ ಪೂರಕ ಕಾಮಗಾರಿ ಆಗಿದೆ. 2006 ರಲ್ಲಿ ಪರಿಸರ ವಾದಿಗಳಿಂದ ತಡೆ ಬಂದುದರಿಂದ ಇಲ್ಲಿಯವರೆಗೆ ಈ ಯೋಜನೆ ಒಂದಿಂಚೂ ಮುಂದೆ ಸರಿದಿಲ್ಲ,
ಇಡೀ ಉತ್ತರ ಕನ್ನಡವೇ ಪರಿಸರ ಜಿಲ್ಲೆ, ಇಲ್ಲಿ ನುಸುಳಿಕೊಂಡಿರುವ ಕೆಲವು ಡೊಂಗಿ ಪರಿಸರವಾದಿಗಳು ಮಾತ್ರ ತಮ್ಮ ವಯುಕ್ತಿಕ ಸ್ವಾರ್ಥಕ್ಕೆ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೆ ನಮ್ಮ ಜಿಲ್ಲೆಯ ಕೆಲವರ ತೆರೆಮರೆಯ ಕುಮ್ಮುಕ್ಕೂ ಇದೆ ಎಂದು ಆರೋಪಿಸಿದರು.
ತಡೆ ನೀಡುವವರಿಗೆ ನೇರವಾಗಿ ಜಿಲ್ಲೆಯ ಜನರನ್ನು ಎದುರಿಸುವ ತಾಕತ್ತು ಇವರಿಗಿಲ್ಲ, ಇದ್ದರೆ ಇಲ್ಲಿನ ಸಾಧಕ ಬಾಧಕಗಳನ್ನು ಮನದಟ್ಟು ಮಾಡುತ್ತಿದ್ದರು.ನ್ಯಾಯಾಲಯದಲ್ಲಿ ತಡೆ ತರುವ ಪರಿಸರ ವಾದಿಗಳಿಂದಾಗಿ ಯೋಜನೆ ಶಾಪಗ್ರಸ್ತವಾಗಿದೆ. ಪರಿಸರ ಸೂಕ್ಷ್ಮ ವಲಯದ ಪಟ್ಟಿಯಿಂದ ಯೋಜನೆ ಹೊರಗಿದೆ ಎನ್ನುವುದು ಆಶಾದಾಯಕ ಬೆಳವಣಿಗೆ.ಇನ್ನಾದರೂ ಜನಪ್ರತಿನಿಧಿಗಳ ಸರಕಾರದ ಇಚ್ಚಾಶಕ್ತಿಯಿಂದ ಯೋಜನೆ ಕಾರ್ಯಗತವಾಗಬೇಕೆಂದು ಒತ್ತಾಯಿಸಿದರು.
ನಿವೃತ್ತ ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ ಈ ಭಾಗದ ಅಭಿವೃದ್ದಿಗೆ ಹೆಬ್ಬಾಗಿಲು ತೆರೆಯುವ ಯೋಜನೆ ಶೀಗ್ರ ಅಡತಡೆ ನೀಗಿಸಿಕೊಂಡು ಅನುಷ್ಠಾನ ಆಗಬೇಕೆಂದರು.
ಪ್ರಮುಖರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ,ಮಾಧವ ನಾಯಕ,ಸಂತೋಷ ನಾಯ್ಕ,ವಿನೋದ ತಳೆಕರ ಇದ್ದರು.