ಸಿದ್ದಾಪುರ:ಉಂಚಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಕಲಿತು IAS ಉತ್ತೀರ್ಣರಾದ ಮನೋಜ ಹೆಗಡೆಗೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಕದಂಬ ಕಲಾ ವೇದಿಕೆ ಮತ್ತು ಶಾಲಾ ಎಸ್.ಡಿ.ಎಮ್.ಸಿ ಸದಸ್ಯರು ಸೇರಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಮನೋಜ ಹೆಗಡೆ ಮಾತನಾಡಿ ‘ನನ್ನ ತಾಯಿ ಸಹ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರಿಂದ ಅಮ್ಮನ ಜೊತೆ ಚಿಕ್ಕಂದಿನಿಂದಲೇ ಶಾಲೆಗೆ ಬರುತ್ತಿದ್ದೆ. ಬಾಲ್ಯದಲ್ಲಿ ಕಲಿತ ವಿದ್ಯೆ ನನಗೆ ಇಲ್ಲಿಯ ತನಕ ಪ್ರಯೋಜನಕ್ಕೆ ಬಂದಿದೆ. ಸರ್ಕಾರಿ ಶಾಲೆಯಲ್ಲಿ ಕಲಿಯಲು ಎಂದೂ ಹಿಂಜರಿಕೆ,ಕೀಳರಿಮೆ ಬೇಡ. ಸುಂದರವಾದ ಗ್ರಾಮೀಣ ಪರಿಸರವೂ ಸಹ ನನಗೆ ಒಳ್ಳೆಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯವಾಯಿತು.ಪ್ರತಿಭಾ ಕಾರಂಜಿಯಲ್ಲಿನ ಕ್ವಿಜ್ ನಂತಹ ಸ್ಪರ್ಧಾ ಕಾರ್ಯಕ್ರಮಗಳು ಹಾಗೂ ಇಲ್ಲಿ ಶಿಕ್ಷಕರಿಂದ ನನ್ನ ಬೌದ್ಧಿಕ ಶಕ್ತಿ ವೃದ್ಧಿಸಿಕೊಳ್ಳಲು ಪೂರಕವಾಯಿತು. ಎಲ್ಲರ ಜೀವನದಲ್ಲಿಯೂ ಗುರುವಿನ ಮಾರ್ಗದರ್ಶನ ಅಮೂಲ್ಯವಾಗಿರುತ್ತದೆ, ಎಂದರು.ಉಂಚಳ್ಳಿ ಶಾಲೆಯಲ್ಲಿ ವಿದ್ಯೆ ಕಲಿಸಿದ ಶಿಕ್ಷಕ ಮೋಹನ್ ಭಟ್, ಪ್ರತಿಭಾ ನಾಯ್ಕ, ಫರ್ನಾಂಡೀಸ್ ಟೀಚರ್ ರನ್ನು ಸ್ಮರಿಸಿಕೊಂಡರು. ಇದೇ ಸಂದರ್ಭದಲ್ಲಿ ಮಜೋಜ ಹೆಗಡೆಯವರ ಪಾಲಕರಾದ ಶಿಕ್ಷಕಿ ಗೌರಿ ಭಟ್ ಹಾಗೂ ತಂದೆ ರಾಮನಾಥ ಹೆಗಡೆಯವರನ್ನು ಗೌರವಿಸಲಾಯಿತು. ಬಳಿಕ IAS ಪರೀಕ್ಷೆ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಚರ್ಚೆ ನಡೆಯಿತು. ಶಿಕ್ಷಕಿಯರಾದ ಅನಿತಾ ಶೆಟ್ಟಿ, ಯಮುನ ದೇವಾಡಿಗ ಅನಿಸಿಕೆ ವ್ಯಕ್ತಪಡಿಸಿದರು.
ಆರಂಭದಲ್ಲಿ ಜ್ಯೋತಿ ನಾಯ್ಕ ಪ್ರಾರ್ಥಿಸಿದರು. ಶಿಕ್ಷಕಿ ದಾಕ್ಷಾಯಿಣಿ ಹೆಗಡೆ ನಿರೂಪಿಸಿದರು. ಮುಖ್ಯಶಿಕ್ಷಕಿ ರೋಹಿಣಿ ನಾಯಕ ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕಿ ಅನಿತಾ ಪಟಗಾರ ವಂದಿಸಿದರು.