ಶಿರಸಿ: ನಗರದ ಮರಾಠಿಕೊಪ್ಪ ಅಜಿತ ಮನೋಚೇತನ ಸಂಸ್ಥೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ 25ನೇ ವರ್ಷದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ ಅವರು ಜು.13 ರಂದು ಬೆಳಿಗ್ಗೆ ನಡೆದ ಅಜಿತ ಮನೋಚೇತನ ಸಂಸ್ಥೆಯ ಸರಳ ಸಮಾರಂಭದಲ್ಲಿ ಸಂಸ್ಥೆಯ ಬ್ರೋಶರ್ ಬಿಡುಗಡೆ ಮಾಡಿದರು.25 ವರ್ಷಗಳಷ್ಟು ಸಾರ್ಥಕ ಮಾನವೀಯ ಸೇವೆ ಮಾಡಿದ ಸಂಸ್ಥೆಯ ಕಾರ್ಯಕರ್ತರನ್ನು ಶ್ಲಾಘಿಸಿದರು. ರಾಜ್ಯ ಸರ್ಕಾರ ವಿಕಲಚೇತನರ ಸೇವಾ ಪ್ರಶಸ್ತಿ ನೀಡಿದೆ. ಅಜಿತ ಮನೋಚೇತನಕ್ಕೆ ದೇಶ ಮಟ್ಟದ ಸನ್ಮಾನವು ಸಿಗಲಿ ಎಂದು ಹಾರೈಸಿದರು. ಯೋಗಪಟು ಅಜಿತಕುಮಾರ ಅವರು ಪ್ರಾತಃ ಸ್ಮರಣೀಯರು. ಅವರಿಂದ ನಮ್ಮಂಥ ಸಾವಿರಾರು ಕಾರ್ಯಕರ್ತರಿಗೆ ಪ್ರೇರಣೆ ಸಿಕ್ಕಿದೆ ಎಂದು ಹೇಳಿದರು. ಶಾಲೆಯ ವಿಶೇಷ ಮಕ್ಕಳಿಗೆ ಬಿಸಿಯೂಟ ನೀಡಲು ಕ್ರಮ ಕೈಗೊಳ್ಳಲು ಡಿ.ಡಿ.ಪಿ.ಐ ರವರಿಗೆ ಸೂಚಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಅನಂತ ಹೆಗಡೆ ಅಶಿಸರ ಸ್ವಾಗತಿಸಿದರು. ಸಮಾಜದ ಬೆಂಬಲವೇ ನಮಗೆ ಬಲ ನೀಡಿದೆ ಎಂದು 25 ವರ್ಷಗಳ ದಾರಿಯನ್ನು ವಿವರಿಸಿದರು.ಸಂಸ್ಥೆಯ ಅಧ್ಯಕ್ಷ ಸುಧೀರ ಭಟ್ ಅಧ್ಯಕ್ಷತೆ ವಹಿಸಿದರು. ಸರಳ ಸಜ್ಜನಿಕೆಯ ಶಿಕ್ಷಣ ಸಚಿವರಿಗೆ ಶಾಲು, ಫಲ ನೀಡಿ ಸನ್ಮಾನಿಸಿದರು. ನಗರಸಭೆ ಅಧ್ಯಕ್ಷರಾದ ಗಣಪತಿ ನಾಯ್ಕ, ಜಿಲ್ಲಾ ಶಿಕ್ಷಣ ಅಧಿಕಾರಿಗಳು , ತಾಲೂಕಾ ಶಿಕ್ಷಣ ಅಧಿಕಾರಿಗಳು, ಸಿ.ಡಿ.ಪಿ.ಒ ಶಿರಸಿ, ಟ್ರಸ್ಟಿಗಳಾದ ಡಾ. ಜಿ.ಎಂ ಹೆಗಡೆ, ಪ್ರೋ. ರವಿ ನಾಯಕ,ವಿ.ಆರ್ ಹೆಗಡೆ ಹೊನ್ನೆಗದ್ದೆ, ಡಾ. ಕೇಶವ ಕೊರ್ಸೆ, ನಾರಾಯಣ ಗಡಿಕೈ ಮುಂತಾದವರು ಪಾಲ್ಗೊಂಡಿದರು. ಮುಖ್ಯ ಶಿಕ್ಷಕಿ ನರ್ಮದಾ ವಂದಿಸಿದರು.ಅಂಗವಿಕಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಶಿಕ್ಷಕರ ಸಮಸ್ಯೆಗಳ ಬಗ್ಗೆ ನರ್ಮದಾ ಅವರು ಸಚಿವರ ಗಮನ ಸೆಳೆದರು. ವಿಶೇಷ ಮಕ್ಕಳು ಪ್ರಾರ್ಥನೆ ಹಾಡಿದರು. ಸಚಿವ ಬಿ.ಸಿ ನಾಗೇಶ ಮತ್ತು ಶ್ರೀಮತಿ ವೀಣಾ ನಾಗೇಶರವರು ಮಕ್ಕಳಿಗೆ ಹಣ್ಣು ನೀಡಿ ಶುಭ ಹಾರೈಸಿದರು. ವಿಶೇಷ ಮಕ್ಕಳು ತಾವೇ ತಯಾರಿಸಿದ ಹೂ ಗುಚ್ಚವನ್ನು ಸಚಿವರಿಗೆ ನೀಡಿದರು.