ಕಾರವಾರ:ಪವಿತ್ರ ಕ್ಷೇತ್ರವಾದ ಅಮರನಾಥ ಗುಹೆ ಬಳಿಯೇ ಶುಕ್ರವಾರ ಸಂಜೆ 5.30 ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ಇದರಿಂದ ಅಮರನಾಥ ಯಾತ್ರೆ ಮಾರ್ಗದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿ, ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ದಿಢೀರನೇ ಜೋರಾಗಿ ನೀರು ಹರಿದು ಬಂದಿದ್ದರಿಂದ ಯಾತ್ರೆಯ ಮಾರ್ಗದಲ್ಲಿ ಯಾತ್ರಾರ್ಥಿಗಳು ತಂಗಲು ನಿರ್ಮಿಸಿದ್ದ ಟೆಂಟ್ ಗಳು ಪ್ರವಾಹದ ನೀರಿನ ಹೊಡೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋಗಿವೆ ಟೆಂಟ್ ಗಳಲ್ಲಿದ್ದ ಕೆಲವು ಯಾತ್ರಾರ್ಥಿಗಳು ಪ್ರವಾಹದ ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಮೇಘಸ್ಫೋಟದ ಅನಾಹುತ ಬಳಿಕ ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ .
ಉತ್ತರ ಕನ್ನಡ ಜಿಲ್ಲೆಯಿಂದ ಯಾರಾದರೂ ಅಮರನಾಥ ಯಾತ್ರೆಗೆ ತೆರಳಿದ್ದಲ್ಲಿ ಅಂತವರ ಮಾಹಿತಿ ಸಂಗ್ರಹಿಸಲು ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದುದರಿಂದ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ಉತ್ತರ ಕನ್ನಡ ಜಿಲ್ಲೆಯಿಂದ ಪವಿತ್ರ ಕ್ಷೇತ್ರವಾದ ಆಮರನಾಥ ಕ್ಷೇತ್ರ ಯಾತ್ರೆ ಕೈಗೊಂಡು, ಮೇಘಸ್ಫೋಟದ ಪ್ರವಾಹಕ್ಕೆ ಸಿಲುಕಿರುವ ಅಥವಾ ಸುರಕ್ಷಿತವಾಗಿರುವ ಯಾತ್ರಾರ್ಥಿಗಳು ಯಾರಾದರೂ ಇದ್ದಲ್ಲಿ ಅವರ ಸಂಬಂಧಿಕರು ಅಥವಾ ಸಾರ್ವಜನಿಕರು ಕೂಡಲೇ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ 1077 (ಲ್ಯಾಂಡ್ ಲೈನ್ ನಂ. 08382–229857 ವಾಟ್ಸಪ್ ನಂ: 9483511015) ಕರೆ ಮಾಡಿ ಸಂಬಂಧಪಟ್ಟ ಯಾತ್ರಾರ್ಥಿಗಳ ವಿವರ / ಮಾಹಿತಿಯನ್ನು ನೀಡುವಂತೆ ಕೋರಿದೆ .