ಭಟ್ಕಳ: ನಿರಂತರವಾಗಿ ನಾಲ್ಕೈದು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ ಪಟ್ಟಣದ ತಗ್ಗು ಪ್ರದೇಶ ಹಾಗೂ ನದಿಯ ತಟದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಬಹುತೇಕ ಭಾಗಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ನಾಲ್ಕೈದು ದಿನದಿಂದ ಬಿಡದೇ ಸುರಿಯುತ್ತಿರುವ ಮಳೆಯು ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡಿದ್ದು, ತಾಲ್ಲೂಕಿನ ಚೌಥನಿ ನದಿ ತುಂಬಿ ಸೇತುವೆ ಮುಳುಗಡೆಯಾಗಿದೆ. ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ತೆಂಗಿನಗುಂಡಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಕುಸಿದು ಅಪಾರ ಹಾನಿ ಸಂಭವಿಸಿದೆ. ಹೆಬಳೆ ಗ್ರಾಮದ ಹೊನ್ನೆಗದ್ದೆ ಮಜಿರೆಯ ಮಾದೇವ ನಾಯ್ಕ ಎನ್ನುವವರ ಮನೆಯ ಮೇಲೆ ಅಡಿಕೆ ಮರವೊಂದು ಮುರಿದು ಬಿದ್ದು ವಾಸ್ತವ್ಯ ಮನೆಗೆ ಹಾನಿಯಾಗಿದೆ.
ಶಿರಾಲಿ-1 ಗ್ರಾಮ ಗೌರಿ ನಾಯ್ಕ ಎನ್ನುವವರ ಮನೆಯ ಅಡುಗೆ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಮನೆಯಲ್ಲಿದ್ದವರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಮುಟ್ಟಳ್ಳಿ ಪಂಚಾಯತ್ ವ್ಯಾಪ್ತಿಯ ಬಿಳಲಖಂಡ ಮಜಿರೆಯಲ್ಲಿ ಬಿಬಿ ಸಾರಾ ಅಮೀರ್ ಹಂಮ್ಜಾ ಎನ್ನುವವರ ಮನೆಯ ಮೇಲೆ ಹಲಸಿನ ಮರವೊಂದು ಬಿದ್ದು ಹಾನಿಯಾಗಿದ್ದು ಮನೆಯಲ್ಲಿದ್ದವರು, ಸುರಕ್ಷಿತವಾಗಿ ಪಾರಾಗಿದ್ದಾರೆ ಎನ್ನಲಾಗಿದೆ. ಭಾರೀ ಗಾಳಿಗೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೇಕ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸರಿಪಡಿಸಲು ಮಳೆಯಲ್ಲಿಯೇ ಕೆಲಸ ಮಾಡುತ್ತಿರುವುದು ಕಂಡುಬಂದಿತು.
ಅನೇಕ ಗ್ರಾಮೀಣ ರಸ್ತೆಗಳು ಕಿತ್ತು ಹೋಗಿದ್ದು, ಮಳೆಯ ನೀರು ಹೆಚ್ಚಿನ ಕಡೆಗಳಲ್ಲಿ ರಸ್ತೆಯ ಮೇಲೆಯೇ ಹರಿಯುವುದರಿಂದ ರಸ್ತೆ ಹೊಂಡಗಳು ಬಿದ್ದು ಜನ, ವಾಹನ ಸಂಚಾರಕ್ಕೆ ತೀರಾ ತೊಂದರೆಯಾಗಿದೆ. ಪಟ್ಟಣದಿಂದ ಪುರವರ್ಗಕ್ಕೆ ಹೋಗುವ ರಸ್ತೆಯಲ್ಲಿ ಸಂಪರ್ಕ ಕಡಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಚಿನ ಮಾರುತಿ ನಗರ, ಮಣ್ಕುಳಿಯ ಭಾಗದ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಅಪಾರ ಮಳೆಗೆ ಸರ್ಪನಕಟ್ಟೆ ಚೆಕ್‌ಪೋಸ್ಟ್ ಬಳಿಯ ಹುಲಿದುರ್ಗಿ ದೇವಸ್ಥಾನ ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಗುಡ್ಡ ಕುಸಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ನಂತರ ಐಆರ್‌ಬಿ ಕಂಪನಿಯ ಸಿಬ್ಬಂದಿ ಕಾರ್ಯಾಚರಣೆಯ ಬಳಿಕ ಸಂಚಾರಕ್ಕೆ ಅನುಕೂಲವಾಗಿದೆ.
ತಲಾಂದ ಸಮೀಪ ಕೃಷಿ ಜಮೀನಿಗೆ ನೀರು ನುಗ್ಗಿದೆ. ಗದ್ದೆಗಳಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಸಸಿಗಳು ಕೊಚ್ಚಿಕೊಂಡು ಹೋಗಿದ್ದು, ರೈತರು ಚಿಂತಿತರಾಗಿದ್ದಾರೆ. ಕೃಷಿ ಮಾಡಲು ನೀರಿಗಾಗಿ ರೈತರು ನದಿಗೆ ಸಣ್ಣ ಕಟ್ಟುಗಳನ್ನು ನಿರ್ಮಿಸಿಕೊಂಡಿದ್ದರು. ಸುರಿದ ಭಾರಿ ಮಳೆಗೆ ಅವುಗಳು ಸಹ ಒಡೆದಿವೆ. ತಾಲೂಕಿನ ಪ್ರಮುಖ ನದಿಗಳಾದ ವೃಂದಾವನ ಗೋಪಿನಾಥ ನದಿ, ಚೌಥನಿ ನದಿ ಮೈತುಂಬಿ ಹರಿಯುತ್ತಿವೆ. ಚೌಥನಿ ಮತ್ತು ಮೂಡಭಟ್ಕಳದ ಸಂಕದ ಹೊಳೆಯ ಸೇತುವೆ ಮುಳುಗಡೆಯಾಗಿದೆ. ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಕುದುರೆ ಬೀರಪ್ಪ ಮತ್ತು ಹನುಮಂತ ದೇವಸ್ಥಾನ ಅರ್ಧ ಜಲಾವೃತ್ತಗೊಂಡಿದೆ. ಇದರಿಂದ ಮುಂಡಳ್ಳಿ ಹಾಗೂ ಚೌಥನಿ ಗ್ರಾಮದ ಮನೆಗಳು ನೀರಿನಿಂದಾವೃತಗೊಂಡಿವೆ.
ಭರ್ತಿಗೊಂಡ ಕಡವಿನಕಟ್ಟೆ ಡ್ಯಾಮ್: ಕಳೆದ ಒಂದು ವಾರದಿಂದ ಎಗ್ಗಿಲ್ಲದೇ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಕಡವಿನಕಟ್ಟೆ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಡ್ಯಾಂನಲ್ಲಿ ನೀರು ತುಂಬಿ ಅಂದಾಜು 4-5 ಅಡಿಗಳಷ್ಟು ಎತ್ತರದಿಂದ ವೆಂಕಟಾಪುರ ನದಿಗಳತ್ತ ಸಾಗುತ್ತಿರುವುದು ಮನಮೋಹಕವಾಗಿದೆ.