ದಾಂಡೇಲಿ: ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆಯ ಆಶ್ರಯದಡಿ ವನಮಹೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.
ಉಪ ವಲಯಾರಣ್ಯಾಧಿಕಾರಿ ಸಂದೀಪ ನಾಯ್ಕ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರಕರಾಗಬೇಕು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ವಿಶೇಷವಾದ ಕಾಳಜಿಯನ್ನಿಟ್ಟುಕೊಂಡಲ್ಲಿ ಸಮೃದ್ಧ ಅರಣ್ಯ ಸಂಪತ್ತಿನ ರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿರಬೇಕೆಂದು ಕರೆ ನೀಡಿದರು.
ಇನ್ನೋರ್ವ ಉಪ ವಲಯಾರಣ್ಯಾಧಿಕಾರಿ ಆನಂದ ರಾಥೋಡ, ಪರಿಸರ ಇದ್ದರೆ ನಾವು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಕಿಶೋರ ಕಿಂದಳ್ಕರ್, ಪರಿಸರ ಸಂರಕ್ಷಣೆ ಬಗ್ಗೆ ಅರಣ್ಯ ಇಲಾಖೆ ಶಾಲಾ ಮಟ್ಟದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹವಾಗಿದೆ. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷರನ್ನಾಗಿಸಲು ಇಂಥಹ ಕಾರ್ಯಕ್ರಮಗಳು ಸಹಕಾರಿ ಎಂದರು.
ವೇದಿಕೆಯಲ್ಲಿ ಉಪ ವಲಯಾರಣ್ಯಾಧಿಕಾರಿಗಳಾದ ಲೋಕೇಶ ಗೌಡ, ಅನಿಲ್ ಆಚಾರಟ್ಟಿ, ಚಿತ್ರಕಲಾ ಶಿಕ್ಷಕ ಅಬ್ದುಲ್ ರಜಾಕ್ ಭಾಗವನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿಯರಾದ ವೀಣಾ ಮನೇಹ್ತಾ ಸ್ವಾಗತಿಸಿದ ಕಾರ್ಯಕ್ರಮಕ್ಕೆ ವಿಭಾ ವಂದಿಸಿದರು. ಪದ್ಮಶ್ರೀ ಜೈನ್ ಕಾರ್ಯಕ್ರಮ ನಿರೂಪಿಸಿದರು.