ಕುಮಟಾ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ತೀರ್ಥರ ಚಾತುರ್ಮಾಸ್ಯ ವೃತವು ಪಟ್ಟಣದ ರಥಬೀದಿಯಲ್ಲಿರುವ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಜುಲೈ 20ರಂದು ನಡೆಯಲಿದೆ ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಗೋಪಾಲ ಕಿಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜುಲೈ 16ರಂದು ಸಂಜೆ 6.30 ಘಂಟೆಗೆ ಶ್ರೀಗಳ ಪುರಪ್ರವೇಶವಾಗಲಿದೆ. 20ರಂದು ಸಂಸ್ಥಾನ ದೇವರ ಮಹಾ ಸಂಪ್ರೋಕ್ಷಣೆ, ಮೃತ್ತಿಕಾ ಪೂಜನ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ಭೋಜನೆ ನಡೆಯಲಿದೆ. ಸಂಜೆ ವೇದವ್ಯಾಸ ಪೂಜೆಯ ನಂತರ ಶ್ರೀಗಳು ಚಾತುರ್ಮಾಸ ವೃತವನ್ನು ಸ್ವೀಕರಿಸಲಿದ್ದಾರೆ. ಶ್ರೀಗಳ ಪಟ್ಟಾಭೀಷೇಕದ ಪ್ರಥಮ ವರ್ಧಂತಿ ಆಚರಣೆ, ಧರ್ಮಸಭೆ, ಶ್ರೀಗಳ ಚಾತುರ್ಮಾಸದ ಕುರಿತು ಶುಭನುಡಿ ಜರುಗಲಿದೆ. ಸೆ.10 ರಂದು ಚಾತುರ್ಮಾಸ ವೃತವು ಮೃತ್ತಿಕಾ ವಿಸರ್ಜನೆ, ಸೀಮೋಲ್ಲಂಘನದೊಂದಿಗೆ ಪೂರ್ಣತೆ ಪಡೆಯಲಿದೆ. ಆನಂತರ ಅಭಿನಂದನಾ ಸಮಾರಂಭ ನೆರವೇರಲಿದೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಅರವಿಂದ ಪೈ ಮಾತನಾಡಿ, ಪ್ರತಿದಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ದಿನಕ್ಕೆ 2 ಸಾವಿರ ಭಕ್ತರು ಆಗಮಿಸುವ ನೀರಿಕ್ಷೆಯಿದೆ. ಚಾತುರ್ಮಾಸ ಆಚರಣಾ ಸಮಿತಿ ಮತ್ತು ದೇವಾಲಯದ ವತಿಯಿಂದ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಶೇಷಗಿರಿ ಶಾನಭಾಗ ವಲ್ಲಿಗದ್ದೆ, ಚಾತುರ್ಮಾಸ ಆಚರಣಾ ಸಮತಿಯ ಸದಸ್ಯರಾದ ಅರವಿಂದ ಶಾನಭಾಗ, ವಸುದೇವ ಪ್ರಭು, ವಿಜಯಾನಂದ ಗೋಳಿ, ಆರ್.ಎ.ಪೈ ಸೇರಿದಂತೆ ಮತ್ತಿತರರು ಇದ್ದರು.
ಕೋಟ್-
23ನೇ ಯತಿ ವಿದ್ಯಾಧಿರಾಜ ತೀರ್ಥರು ತಮ್ಮ ಶಿಷ್ಯರಾಗಿರುವ ವಿದ್ಯಾಧೀಶ ತೀರ್ಥರೊಂದಿಗೆ 2020ರಲ್ಲಿ ಕುಮಟಾದಲ್ಲಿ ಚಾತುರ್ಮಾಸ ವೃತ ಆಚರಣೆಗೆ ನಿಶ್ಚಯಿಸಿದ್ದರು. ಕೊವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಗುರುಗಳ ಇಚ್ಛೆಯನ್ನು ಪೂರ್ಣಗೊಳಿಸಲು ಮತ್ತು ಕುಮಟಾದ ಸದ್ಭಕ್ತರ ಬೇಡಿಕೆಯನ್ನು ಮನ್ನಿಸಿ ವಿದ್ಯಾಧೀಶ ತೀರ್ಥರು ಚಾತುರ್ಮಾಸ ವೃತವನ್ನು ಕುಮಟಾದಲ್ಲಿ ಹಮ್ಮಿಕೊಂಡಿದ್ದಾರೆ.– ಗೋಪಾಲ ಕಿಣಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ