ಶಿರಸಿ: ನಾವು ಸಂಸ್ಕೃತರಾದರೆ ಸಮಾಜ ಸಂಸ್ಕ್ರತ ನಿರೀಕ್ಷಿಸುತ್ತದೆ ಎಂಬ ಸಂಗತಿ ನಿಜವಾಗಿದೆ ಎಂದು ನಾಡಿನ ಹೆಸರಾಂತ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.
ಕರ್ನಾಟಕ ವಿಶ್ವ ವಿದ್ಯಾಲಯದಿಂದ ನೂತನವಾಗಿ ವಿದ್ಯಾ ವಾಚಸ್ಪತಿ ಡಿ ಲಿಟ್ ಪದವಿ ಪುರಸ್ಕೃತರಾಗಲಿರುವ ಅವರನ್ನು ತಾಲೂಕಿನ ಬೆಟ್ಟಕೊಪ್ಪದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಹಾಗೂ ಕಲಾವಿದರು ನೀಡಿದ ಗೌರವ ಸ್ವೀಕರಿಸಿ ಮಾತನಾಡಿದರು.
ಸಾಮಾನ್ಯವಾಗಿ ಸಂಸ್ಕೃತದವರಿಗೆ ಸಂಸ್ಕೃತವು ಓದು, ಬರಹಕ್ಕಷ್ಟೇ ಸೀಮಿತ ಎಂಬ ಭಾವನೆ ಇದೆ. ಆದರೆ ಸಂಸ್ಕೃತ ಕಲಿತು ನಡೆದರೆ ಸಮಾಜ ಕೂಡ ನಿರೀಕ್ಷೆ ಮಾಡುತ್ತದೆ ಎಂಬುದು ಅನುಭವಕ್ಕೆ ಬಂದಿದೆ. ಅಂತಹ ಪ್ರೀತಿಯ ಗುರುತಾಗಿ ವಿದ್ಯಾ ವಾಚಸ್ಪತಿ ಬಂದಿದೆ ಎಂದರು.
ಅಭಿನಂದನಾ ನುಡಿ ಆಡಿದ ಕಲಗದ್ದೆ ನಾಟ್ಯ ವಿನಾಯಕ ದೇವಸ್ಥಾನದ ಪ್ರಧಾನ ವಿಶ್ವಸ್ಥ, ಕಲಾವಿದ ವಿನಾಯಕ ಹೆಗಡೆ ಕಲಗದ್ದೆ, ಉಮಾಕಾಂತ ಭಟ್ ಅವರು ಕೇವಲ ಈ ಭಾಗವದವರಲ್ಲ. ಅಖಂಡ ಭಾರತ ದೇಶದ ಭಾಗದವರಾಗಿದ್ದಾರೆ. ನಮ್ಮ ಮಾತಿನ ಹಾಗೂ ಭಾವದ ಎಲ್ಲೆ ಮೀರಿದ ಶ್ರೇಷ್ಠ ವಿದ್ವಾಂಸರು ಎಂದರು.
ವಿಶ್ವಶಾಂತಿ ಸೇವಾ ಟ್ರಸ್ಟ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ, ಟ್ರಸ್ಟಿ ನರೇಂದ್ರ ಹೆಗಡೆ, ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆ ವಾದಕ ಶಂಕರ ಭಾಗವತ್, ಚಂಡೆ ವಾದಕ ವಿಘ್ನೇಶ್ವರ ಗೌಡ ಕೆಸರಕೊಪ್ಪ, ಉದಯ ಸೌಂಡ್ಸ್ ಉದಯ ಪೂಜಾರಿ, ಬಾಲ ಕಲಾವಿದೆ ತುಳಸಿ ಹೆಗಡೆ ಇತರರು ಇದ್ದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು