ಕಾರವಾರ: ಸುಂಕೇರಿ- ಕಡವಾಡ ಸೇತುವೆ ಸಮೀಪ ನಗರಸಭೆಯವರು ಕಾಂಡ್ಲಾ ಗಿಡಗಳನ್ನು ಕಡಿದು ನದಿಗೆ ಮಣ್ಣು ಹಾಕಿರುವುದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಸಿಆರ್‌ಝಡ್ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ನಗರಸಭೆ ಪರಿಸರ ಕಾನೂನನ್ನು ಉಲ್ಲಂಘಿಸಿ ಸುಂಕೇರಿ ಬಳಿ ಕಾಳಿ ನದಿಯಲ್ಲಿ ಕಾಂಡ್ಲಾ ಗಿಡಗಳನ್ನು ಕಡಿದು ನದಿಗೆ ತಡೆಗೋಡೆ ನಿರ್ಮಿಸಿ ಅಲ್ಲಿ ಗಟಾರುಗಳಿಂದ ಎತ್ತಿದ ಹೂಳನ್ನು ತಂದು ಹಾಕಿ ಆ ಸ್ಥಳವನ್ನು ಸಮತಟ್ಟು ಮಾಡುತ್ತಿದ್ದು, ಪರಿಸರದ ದೃಷ್ಟಿಯಿಂದ ಅಪಾಯಕಾರಿಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಾಳಿ ನದಿಯಲ್ಲಿ ಸಿಆರ್‌ಝಡ್-1 ವಲಯ ಮತ್ತು ಸಿವಿಸಿಎ ವಲಯದಲ್ಲಿರುವ ಕಾಂಡ್ಲಾ ಗಿಡಗಳನ್ನು ನಾಶ ಮಾಡಿ ಮೀನುಗಾರಿಕೆ ಮಾಡುತ್ತಿರುವ ಜಾಗವನ್ನು ಅತಿಕ್ರಮಿಸಿ ಮೀನುಗಾರರ ಅನ್ಯಾಯ ಮಾಡಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ನಗರಸಭೆಯ ಕಾನೂನು ಬಾಹಿರ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆ ನೋಟಿಸ್ ನೀಡಿದ್ದರೂ ನಗರಸಭೆಯವರು ಅದನ್ನು ಗಾಳಿ ತೂರಿರುವುದು ಬೇಸರದ ಸಂಗತಿ. ಸಾರ್ವಜನಿಕರ ವಿರೋಧದ ನಡುವೆಯೇ ನಗರಸಭೆ ಕಾಮಗಾರಿ ಮುಂದುವರಿಸುವುದರಿಂದ ಅಲ್ಲಿ ಮೀನುಗಾರಿಕೆ ಮಾಡಿ ಜೀವನ ನಡೆಸುತ್ತಿರುವ ಬಡ ಮೀನುಗಾರರ ಆದಾಯಕ್ಕೆ ಕುತ್ತು ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಗರಸಭೆಯವರು ಅತಿಕ್ರಮಿಸಿಕೊಂಡಿರುವ ಜಾಗ ಅಳಿವೆ ಪ್ರದೇಶವಾಗಿದ್ದು, ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿದೆ. ಆ ಪ್ರದೇಶದಲ್ಲಿ ಕಾಂಡ್ಲಾ ಗಿಡಗಳನ್ನು ಕಡಿದಿರುವುದರಿಂದ ಮೀನಿನ ಸಂತತಿ ನಾಶವಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲಿ ಹಾಕಿರುವ ಹೂಳು ತೆಗೆದು ಕಾಂಡ್ಲಾ ಗಿಡಗಳನ್ನು ಪುನಃ ಬೆಳೆಸಿ, ಮೀನುಗಾರರಿಗೆ ಇಲ್ಲಿಯವರೆಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಸ್ಥರಾದ ಪ್ರಸಾದ ಭೋವಿ, ವಿಕಾಸ ತಾಂಡೇಲ್, ಸುಶಾಂತ್ ಭೋವಿ, ಅಮಿತ್ ನಾಯ್ಕ, ರಾಜು ತಾಂಡೇಲ್, ವಿನಾಯಕ ಭೋವಿ, ಉದಯ ಭೋವಿ, ಅಮಿತ್ ದುರ್ಗೆಕರ. ಪ್ರಕಾಶ್ ಭೋವಿ, ಅರ್ಶಿದ್ ಖಾನ್ ಮತ್ತಿತರರು ಇದ್ದರು.