ದಾಂಡೇಲಿ: ತಾಲೂಕಿನ ಕೇರವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಅನ್ನಪೂರ್ಣ ಪಾಠಣಕರ ಅವರಿಗೆ ಇಂದು ವೃತ್ತಿ ಬದುಕಿನ ನಿವೃತ್ತಿಯ ದಿನ.
ಯಲ್ಲಾಪುರ ತಾಲ್ಲೂಕಿನ ಮಾಣಿ ಪಾಠಣಕರ ಹಾಗೂ ಮಂಜುಳಾ ಪಾಠಣಕರ ರೈತ ದಂಪತಿ ಸುಪುತ್ರಿಯಾಗಿರುವ ಇವರು, ಇಬ್ಬರು ತಮ್ಮಂದಿರು ಮತ್ತು ಓರ್ವ ಅಕ್ಕನೊಂದಿಗೆ ಆಡಿ ಬೆಳೆದವರು. ಯಲ್ಲಾಪುರದ ವೈಟಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕದಿಂದ ಹಿಡಿದು ಪಿಯುಸಿಯವರೆಗೆ ಓದಿ, ಆನಂತರ ಶಿರಸಿಯ ಎಂ.ಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದರು. ಇದರ ಮಧ್ಯದಲ್ಲಿ ಕುಮಟಾದ ಟೀಚರ್ಸ್ ತರಬೇತಿ ಕಾಲೇಜಿನಲ್ಲಿ ಟಿ.ಸಿ.ಎಚ್ ಮುಗಿಸಿದರು.
ಅನ್ನಪೂರ್ಣ ಅವರು ರೈತ ಕುಟುಂಬವಾಗಿದ್ದರಿಂದ ಕಲಿಕೆಯ ಜೊತೆ ಜೊತೆಗೆ ತಂದೆ- ತಾಯಿಯವರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಬೆಳೆದರು. 1981ರಂದು ಶಿಕ್ಷಕಿಯಾಗಿ ದಾಂಡೇಲಿಯ ಅಂಬೇವಾಡಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಆರಂಭಿಸಿ ಅಲ್ಲಿ 2001ರವರೆಗೆ ಸೇವೆ ಸಲ್ಲಿಸಿದ್ದಾರೆ. 2001ರಿಂದ ಮುಖ್ಯೋಪಾಧ್ಯಯಿನಿಯಾಗಿ ಪದೋನ್ನತಿ ಹೊಂದಿ ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೇರವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಮುಂದುವರಿಸಿದ್ದಾರೆ. ಇದೀಗ ನಿವೃತ್ತಿಯೂ ಅದೇ ಶಾಲೆಯಲ್ಲಿ ಪಡೆದ ಹೆಮ್ಮೆ.
ಇವರು ಅಂಬೇವಾಡಿಯಲ್ಲಿ ಸೇವೆ ಸಲ್ಲಿಸುವಾಗಲೂ ಅಲ್ಲಿಯೂ ಅಪಾರ ಜನಪ್ರೀತಿಗೆ ಪಾತ್ರರಾಗಿದ್ದರು. ಅದೇ ರೀತಿ ಕೇರವಾಡದಲ್ಲಿ ಶಾಲೆಯ ಮುಖ್ಯೋಪಾಧ್ಯಯಿನಿಯಾಗಿದ್ದರೂ, ಕೇರವಾಡ ಗ್ರಾಮಕ್ಕೆ ಮಾರ್ಗದರ್ಶಕರಾಗಿಯೂ ಜನರ ಅಪ್ಪುಗೆಗೆ ಪಾತ್ರರಾಗಿದ್ದರು. ತಾನೆಂದು ಸಂಬಳಕ್ಕಾಗಿ ದುಡಿಯದೇ, ಇದು ನನ್ನ ಮಹತ್ವದ ಜವಾಬ್ದಾರಿ ಎಂದು ಅರಿತು ಶಾಲೆಯ ಸಮಗ್ರ ಅಭಿವೃದ್ಧಿಗೆ ತನ್ನನ್ನು ತಾನು ಅರ್ಪಿಸಿಕೊಂಡ ರೀತಿ ಮಾತ್ರ ಸದಾ ಸ್ಮರಣೀಯ. ಶಾಲೆಯ ಆವರಣವನ್ನೊಮ್ಮೆ ನೋಡಿದರೆ ಅನ್ನಪೂರ್ಣ ಪಾಠಣಕರ ಅವರ ವ್ಯಕ್ತಿತ್ವ, ದೂರದೃಷ್ಟಿ ಮತ್ತು ಅವರಲ್ಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿಯನ್ನು ಅನಾವರಣಗೊಳಿಸುತ್ತದೆ. ಶಾಲೆಗೆ ಬೇಕಾದ ಎಲ್ಲ ಅಗತ್ಯ ಮೂಲಸೌಕರ‍್ಯಗಳನ್ನು ಕಾಡಿ, ಬೇಡಿ, ಜಗಳ ಮಾಡಿಯಾದರೂ ಸರಿಯೆ ಎಲ್ಲವನ್ನು ನೀಗಿಸಿಕೊಂಡ ಅವರ ಪರಿಶ್ರಮದ ಸಾಧನೆಗೆ ಇಡೀ ಕೇರವಾಡ ಗೌರವಿಸುತ್ತಿದೆ. ಹಾಗಾಗಿ ಅನ್ನಪೂರ್ಣ ಪಾಠಣಕರ ಅವರು ಶಿಕ್ಷಕಿಯಾಗಿರದೇ ಅಮ್ಮನಾಗಿ ವಿದ್ಯಾರ್ಥಿಗಳ ಜೊತೆಗೆ ಊರಿನ ಅಭಿವೃದ್ಧಿಗೂ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಇವರ ಪ್ರಾಮಾಣಿಕ ಸೇವೆಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಗುರುಶ್ರೇಷ್ಠ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ, ಗೌರವ, ಸನ್ಮಾನಗಳು ಅರಸಿ ಬಂದಿವೆ. ಸರಕಾರಿ ಶಾಲೆಯಾದರೂ ಖಾಸಗಿ ಶಾಲೆಯಂತೆ ಶೋಭಿಸುವಂತೆ ಮಾಡಿದ ಅನ್ನಪೂರ್ಣ ಪಾಠಣಕರ ಅವರ ಪ್ರಾಂಜಲ ವ್ಯಕ್ತಿತ್ವದ ಶೈಕ್ಷಣಿಕ ಸೇವೆಗೆ ಹ್ಯಾಟ್ಸ್ಆಫ್ ಹೇಳಲೇಬೇಕು.