ಜನರ ಪರವಾಗಿ ಹೋರಾಟದಲ್ಲಿ ಯಾವುದೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧ; ಸದಾನಂದ ನಾಯಕ
ಅಂಕೋಲಾ: ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ತೀವ್ರ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಸುಂಕಸಾಳ ಗ್ರಾ.ಪಂ ನಲ್ಲಿ ವಿಶೇಷ ಗ್ರಾಮಸಭೆಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ಬೆಳಿಗ್ಗೆ ನಡೆಸಲಾಯಿತು.
ನಿಮ್ಮ ಗ್ಯಾಂಗ್‌ಮನ್‌ಗಳು ಮನಸ್ಸೋ-ಇಚ್ಛೆ ಕೆಲಸ ಮಾಡುತ್ತಿದ್ದಾರೆ. ಸೆಕ್ಷನ್ ಆಫೀಸರ್ ಮಾತಿಗೂ ಕ್ಯಾರೇ ಎನ್ನದೇ ಗ್ಯಾಂಗ್‌ಮನ್‌ಗಳು ಕಾರ್ಯನಿರ್ವಹಿಸುವುದನ್ನು ನಾವು ಕಂಡಿದ್ದೇವೆ. ಗ್ಯಾಂಗ್‌ಮನ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯದಿಂದಲೇ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಸಭೆಯಲ್ಲಿ ಗ್ರಾಮಸ್ಥ ಶಿವಾನಂದ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ನಾಯ್ಕ ಮಾತನಾಡಿ ಸಿಬ್ಬಂದಿಗಳ ಕೊರತೆಗಳ ನಡುವೆಯೂ ನಾವು ಹಗಲು-ರಾತ್ರಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾಳೆಯಿಂದ 7 ದಿನಗಳ ಕಾಲ ಸುಂಕಸಾಳ ಗ್ರಾ.ಪಂ ಕ್ಕೆ 10 ಜನ ಗ್ಯಾಂಗ್ ಮನ್ ಗಳನ್ನು ನೀಡುತ್ತೇವೆ. ಸೆಕ್ಷನ್ ಆಫೀಸರ್ ನೇತೃತ್ವದಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಸಾರ್ವಜನಿಕರ ಸಹಕಾರವು ಅತ್ಯಗತ್ಯ ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ 63 ಸುಂಕಸಾಳ ಗ್ರಾ.ಪಂ.ಸಮೀಪ ಕಳೆದ 3 ವರ್ಷಗಳಿಂದ ಒಂದೆ ಕಡೇ ಭಾರೀ ಹೊಂಡ ಬೀಳುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ವಿನೋದ ಶೆಟ್ಟಿ ಆಗ್ರಹಿಸಿದರು. ಕೆ.ಎಸ್.ಆರ್.ಟಿ.ಸಿ ಬಸ್ ನಿಲುಗಡೆಗೆ ಸಂಬಂಧಿಸಿದಂತೆ ಉಮೇಶ ನಾಯ್ಕ ಸಮಸ್ಯೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ, ರಾ.ಹೆ. ಇಲಾಖೆ, ಹೆಸ್ಕಾಂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾ.ಪಂ ಅಧ್ಯಕ್ಷೆ ರಮೀಜಾ ಸೈಯದ್, ಸದಸ್ಯರಾದ ಚಂದು ನಾಯ್ಕ, ಪ್ರಭಾವತಿ ನಾಯ್ಕ, ಉಮಾ ಸಿದ್ದಿ, ಪ್ರವೀಣ ನಾಯರ್, ನಾಗರಾಜ ಹೆಗಡೆ, ಪಿಡಿಓ ಓಂಕಾರ ಹಾಗೂ ಸಿಬ್ಬಂದಿಗಳು ಇದ್ದರು.
ಕೋಟ್
ಕಳೆದ ವರ್ಷವೇ ಹೆಸ್ಕಾಂ ಸೆಕ್ಷನ್ ಆಫೀಸರ್ ಹರೀಶ್ ವಿರುದ್ಧ ಜನರಿಂದ ಭಾರೀ ವಿರೋಧ ವ್ಯಕ್ತಗೊಂಡಿತ್ತು. ಜನರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ತಕ್ಷಣ ವರ್ಗಾವಣೆ ಮಾಡಬೇಕೆಂದು ಸಂಬಂಧಪಟ್ಟವರಿಗೆ ಪತ್ರವನ್ನು ಕಳಿಸಲಾಗಿತ್ತು. ಆದರೆ ಈವರೆಗೆ ಅವರ ವರ್ಗಾವಣೆಯಾಗಿಲ್ಲ. ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಲಾಗಿತ್ತು. ಮುಂದಿನ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಹೆಸ್ಕಾಂ ಕಚೇರಿ ಮುಂಭಾಗದಲ್ಲಿ ಅಥವಾ ಶಾಸಕರ ಕಚೇರಿ ಎದುರು ಕೂತು ಉಗ್ರ ಪ್ರತಿಭಟನೆ ನಡೆಸುತ್ತೇವೆ. ಜನರ ಪರವಾಗಿ ನನ್ನ ಮೇಲೆ ಯಾವುದೇ ಕ್ರಮ ಕೈಗೊಂಡರು ಎದುರಿಸಲು ಸಿದ್ಧ.
ಸದಾನಂದ ನಾಯಕ
ಉಪಾಧ್ಯಕ್ಷ ಸುಂಕಸಾಳ ಗ್ರಾಮ ಪಂಚಾಯತ್