Slide
Slide
Slide
previous arrow
next arrow

ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯಿಂದ ನಿರ್ಮಿತವಾದ ಅಂಗನವಾಡಿ ಕೇಂದ್ರ ಲೋಕಾರ್ಪಣೆ

300x250 AD

ದಾಂಡೇಲಿ : ನಗರದ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ನಗರದ ಹಳೆ ದಾಂಡೇಲಿಯ ಸ್ವಾಮಿಲ್ ಹತ್ತಿರ ರೂ.25 ಲಕ್ಷ ಮೊತ್ತದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಅಂಗನವಾಡಿ ಕಟ್ಟಡದ ಉದ್ಘಾಟನೆಯು ಶನಿವಾರ ಜರುಗಿತು.

ನೂತನ ಅಂಗನವಾಡಿ ಕೇಂದ್ರದ ಕಟ್ಟಡವನ್ನು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಮಾಲಕರಾದ ಶ್ರೀ ಕುಮಾರ್ ಬಾಂಗಾಡ್ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರ್ ಬಾಂಗಾಡ್ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಪ್ರಗತಿಗೆ ದಾಂಡೇಲಿ ಜನತೆಯ ಕೊಡುಗೆ ಅಪಾರವಾಗಿದೆ. ಹತ್ತು ಹಲವು ಸಮಸ್ಯೆಗಳನ್ನು ಮೆಟ್ಟಿನಿಂತು ಕಾರ್ಖಾನೆ ದಿನದಿಂದ ದಿನಕ್ಕೆ ಪ್ರಗತಿಯೆಡೆಗೆ ಸಾಗುತ್ತಿದೆ. ಕಾಗದ ಕಾರ್ಖಾನೆಗೆ ಎಲ್ಲವನ್ನೂ ಕೊಟ್ಟ ದಾಂಡೇಲಿಯ ಪ್ರಗತಿಗೆ ಕಾಗದ ಕಾರ್ಖಾನೆಯೂ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಬೇಕಾಗಿರುವುದು ನಮ್ಮ ಜವಾಬ್ದಾರಿಯೂ ಆಗಿದೆ. ಕಾಗದ ಕಾರ್ಖಾನೆಯ ಆರಂಭದ ಸಮಯದಲ್ಲಿ ಕರ್ನಾಟಕ ಸರಕಾರ ನೀಡಿದ ಸಹಕಾರ ಸದಾ ಸ್ಮರಣೀಯವಾಗಿದೆ. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯೂ ತನ್ನ ಸಿಎಸ್ಆರ್ ಯೋಜನೆಯಡಿ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ, ಕ್ರೀಡಾ ಕ್ಷೇತ್ರದ ಅಭ್ಯುದಯಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಇಂದು ಕಾಗದ ಕಾರ್ಖಾನೆಯಿಂದ 14ನೇ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ವೇಗವಾಗಿ ಬದಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಕಾಗದ ಕಾರ್ಖಾನೆಯ ಉತ್ಪಾದನಾ ಚಟುವಟಿಕೆಗೆ ಬಿದಿರಿನ ಬದಲಾಗಿ ಇನ್ನಿತರ ಕಚ್ಚಾ ಸಾಮಗ್ರಿಗಳನ್ನು ಬಳಕೆ ಮಾಡಲಾಗುತ್ತದೆ. ಉತ್ಪಾದನಾ ಚಟುವಟಿಕೆಯಲ್ಲಿ ಕಾಗದ ಕಾರ್ಖಾನೆ, ದಿನದಿಂದ ದಿನಕ್ಕೆ ಪ್ರಗತಿಯನ್ನು ಕಾಣುತ್ತಿರುವುದು ಸಂತಸ ತಂದಿದೆ. ಕಾರ್ಖಾನೆಯ ಪ್ರಗತಿಗೆ ಸಹಕರಿಸುತ್ತಿರುವ ಕರ್ನಾಟಕ ಸರಕಾರಕ್ಕೆ, ಜಿಲ್ಲಾಡಳಿತಕ್ಕೆ, ನಗರ ಸಭೆಗೆ ಹಾಗೂ ಬಹು ಮುಖ್ಯವಾಗಿ ನಗರದ ಜನತೆಗೆ ಮತ್ತು ಕಾರ್ಮಿಕ ಬಂಧುಗಳಿಗೆ ಸದಾ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಈ ಭಾಗದ ಅಭಿವೃದ್ಧಿಗೆ ಕಾಗದ ಕಾರ್ಖಾನೆ ಸದಾ ಕಂಕಣ ಬದ್ಧವಾಗಿದೆ ಎಂದರು.

ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಅವರು ಕಾರ್ಖಾನೆಯ ಮಾಲಕರಾದ ಶ್ರೀಕುಮಾರ್ ಬಾಂಗಾಡ ಅವರ ಮಾರ್ಗದರ್ಶನದಂತೆ ಕಾರ್ಖಾನೆಯ ಪ್ರಗತಿಯ ಜೊತೆಗೆ ಈ ಭಾಗದ ಪ್ರಗತಿಗೂ ಅತ್ಯಂತ ಬದ್ಧತೆಯಿಂದ ಕಾರ್ಖಾನೆ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದರು.

ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರು ಮಾತನಾಡಿ ದಾಂಡೇಲಿಯ ಜನತೆಯ ಜೀವನಾಡಿಯಾಗಿರುವ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಸಿಎಸ್ಆರ್ ಯೋಜನೆಯ ಮೂಲಕ ಮಾಡುತ್ತಿರುವ ಕಾರ್ಯ ಚಟುವಟಿಕೆಗಳು ಶ್ಲಾಘನೀಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಕಾಗದ ಕಾರ್ಖಾನೆ ನೆರವಿಗೆ ಬಂದಿರುವುದನ್ನು ವಿಶೇಷವಾಗಿ ಸ್ಮರಿಸಿಕೊಂಡರು. ನಗರಕ್ಕೆ ಅತಿ ಅವಶ್ಯವಾಗಿ ಬೇಕಾಗಿದ್ದ ಆಕ್ಸಿಜನ್ ಪೂರೈಕೆ ಕೇಂದ್ರವನ್ನು ಸ್ಥಾಪಿಸುವ ಮೂಲಕ ದಾಂಡೇಲಿಗರ ಬಹುಮುಖ್ಯ ಬೇಡಿಕೆಯನ್ನು ಈಡೇರಿಸಿದ ಕಾಗದ ಕಾರ್ಖಾನೆಯ ಸಾಮಾಜಿಕ ಕೊಡುಗೆಯನ್ನು ಕೊಂಡಾಡಿದರು.

300x250 AD

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಹಲವಾಯಿ ಪ್ರಾಸ್ತಾವಿವಾಗಿ ಮಾತನಾಡಿ ಕಾರ್ಖಾನೆಯೂ ದಾಂಡೇಲಿಯ ಉಸಿರಾಗಿದೆ. ಇವತ್ತು ನಾವು ನೀವೆಲ್ಲರೂ ನೆಮ್ಮದಿಯ ಬದುಕನ್ನು ನಡೆಸುತಿದ್ದೇವೆ ಎಂದಾದರೆ ಅದಕ್ಕೆ ಕಾರಣ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಎಂದು, ಕಾಗದ ಕಾರ್ಖಾನೆಯ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದರು.

ನಗರಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೋಡೆ ಅವರು ಮಾತನಾಡಿ ಮನವಿಗೆ ಸ್ಪಂದಿಸಿ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡವನ್ನು ನಿರ್ಮಿಸಿಕೊಟ್ಟ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಕುಮಾರ್ ಬಾಂಗಾಡ ಅವರನ್ನು ದಾಂಡೇಲಿ ನಗರಸಭೆಯ ವತಿಯಿಂದ, ನಗರ ಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೋಡೆ ಅವರಿಂದ ವಾರ್ಡಿನ‌ ಜನತೆಯ ಪರವಾಗಿ, ರೋಟರಿ ಕ್ಲಬ್ ಲಯನ್ಸ್ ಕ್ಲಬ್, ವೈದ್ಯರ ಸಂಘ, ಶ್ರೀ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಘಟಕ, ದಾಂಡೇಲಿ ವೆಲ್ಫೇರ್ ಸೊಸೈಟಿ, ಬಂಗೂರ ನಗರ ಪದವಿ ಕಾಲೇಜ್, ಬಂಗೂರ ನಗರ ಜ್ಯೂನಿಯರ್ ಕಾಲೇಜು, ತೋಹಿದ್ ಶಿಕ್ಷಣ ಸಂಸ್ಥೆ, ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘ, ಹಳೆ ದಾಂಡೇಲಿಯ ಶ್ರೀ‌ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ, ಗೂಡ್ಸ್ ಟೆಂಪೋ ಚಾಲಕರ ಹಾಗೂ ಮಾಲಕರ ಸಂಘ, ಬಾಂಬುಗೇಟ್ ಆಟೋ ಚಾಲಕರ ಸಂಘ ಹೀಗೆ ವಿವಿಧ ಸಂಘಗಳಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ ನಿಮಿತ್ತ ಅಂಗನವಾಡಿ ಕೇಂದ್ರದ ಆವರಣದಲ್ಲಿ ಗಿಡಗಳನ್ನು ನೀಡಲಾಯಿತು.

ಮೋಹನ ಹಲವಾಯಿಯವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ ವಂದಿಸಿದರು. ಕೀರ್ತಿ ಗಾಂವಕರ ಕಾರ್ಯಕ್ರಮವನ್ನು ನಿರೂಪಿಸಿದರು. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಜೆ.ಆರ್ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದ ಸಿಬ್ಬಂದಿಗಳು ಸಹಕರಿಸಿದರು.

Share This
300x250 AD
300x250 AD
300x250 AD
Back to top