ದಾಂಡೇಲಿ : ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಗುತ್ತಿಗೆ- ಹೊರಗುತ್ತಿಗೆ ಮುನ್ಸಿಪಲ್ ಕಾರ್ಮಿಕರ ಖಾಯಂಮಾತಿ ಪ್ರಸ್ತಾಪವಿರಲಿ, ಅವರನ್ನು ನೇರ ಪಾವತಿಯಡಿಯಲ್ಲಿ ತರಲು ಸಹ ಮುಂದಾಗದಿರುವ ಕಾರಣ ಗುತ್ತಿಗೆ, ಹೊರಗುತ್ತಿಗೆ ಮುನ್ಸಿಪಾಲ್ ಕಾರ್ಮಿಕರ ಪಾಲಿಗೆ ಈ ಬಜೆಟ್ ಕಹಿಯಾದ ಬಜೆಟ್ ಆಗಿದೆ ಎಂದು ಕರ್ನಾಟಕ ರಾಜ್ಯ ಮುನ್ಸಿಪಾಲ್ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಡಿ.ಸ್ಯಾಮಸನ್ ಅಭಿಪ್ರಾಯಿಸಿದ್ದಾರೆ.
ಅವರು ನಗರದಲ್ಲಿ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ಈ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಗುತ್ತಿಗೆ- ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವಂತಹ ಎಲ್ಲಾ ಮುನ್ಸಿಪಲ್ ಕಾರ್ಮಿಕರನ್ನು ಕನಿಷ್ಠ ನೇರ ಪಾವತಿಗೆ ತರುವುದಕ್ಕಾದರೂ ಕ್ರಮಗಳನ್ನು ವಹಿಸುವಂತೆ ಒತ್ತಾಯಿಸಲಾಗಿತ್ತು. ಈ ಸಾಲಿನ ಬಜೆಟಿನಲ್ಲಿ ಕನಿಷ್ಠ ಈ ಎಲ್ಲಾ ಕಾರ್ಮಿಕರನ್ನು ನೇರ ಪಾವತಿಯಡಿಯಲ್ಲಿ ತಂದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಶೇಕಡ 30ರಷ್ಟು ವೆಚ್ಚದ ಉಳಿತಾಯಕ್ಕೆ ಇದ್ದ ಸಾಧ್ಯತೆಯನ್ನು ಸರ್ಕಾರ ಪರಿಗಣಿಸದೆ ಇರುವುದನ್ನು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.