ದಾಂಡೇಲಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಸ್ಥಾಪನೆಯ 550 ವರ್ಷಗಳ ಸುಸಂದರ್ಭದಲ್ಲಿ ಪರ್ತಗಾಳಿ ಮಠದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಯವರ ದಿವ್ಯ ಸಂಕಲ್ಪದಂತೆ ಶ್ರೀ ರಾಮ ನಾಮ ಜಪ ಅಭಿಯಾನವು ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಪ್ರತಿದಿನ ಮಕ್ಕಳು, ಮಹಿಳೆಯರು, ಹಿರಿಯರು ಹೀಗೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ಶ್ರೀ ರಾಮನಾಮ ಜಪ ಅಭಿಯಾನದಲ್ಲಿ ಶ್ರದ್ಧಾಪೂರ್ವಕವಾಗಿ ತೊಡಗಿಸಿಕೊಂಡಿದ್ದಾರೆ.
ಈ ಅಭಿಯಾನದ ಸುಸಂದರ್ಭದಲ್ಲಿ 100ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿರುವ ಹಳೆ ದಾಂಡೇಲಿಯ ಶಾಂತಾಬಾಯಿ ಗೋವಿಂದರಾಯ್ ಅವರನ್ನು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪರವಾಗಿ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಶತಕದ ಸಂಭ್ರಮದಲ್ಲಿರುವ ಶಾಂತಾಬಾಯಿ ಗೋವಿಂದರಾಯ್ ಅವರನ್ನು ನಿವೃತ್ತ ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿ ಬಾಬಣ್ಣ ಶ್ರೀವತ್ಸ ದಂಪತಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಹೆಗಡೆ, ಪ್ರಧಾನ ಕಾರ್ಯದರ್ಶಿ ಸುರೇಶ ಕಾಮತ್, ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಪ್ರಭು, ಸ್ಪೂರ್ತಿ ಮಹಿಳಾ ಮಂಡಳದ ಅಧ್ಯಕ್ಷರಾದ ಪ್ರತಿಮಾ ಕಾಮತ್, ವೈದಿಕರಾದ ಹೃಷಿಕೇಶ ಭಟ್ ಮತ್ತು ಜಿಎಸ್‌ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.