ಯಲ್ಲಾಪುರ: ಇದೇ ಮೊಟ್ಟಮೊದಲ ಬಾರಿಗೆ ತಾಲೂಕಿನ ಗುಳ್ಳಾಪುರದ ಚಾಮುಂಡೇಶ್ವರಿ ಮೈದಾನದಲ್ಲಿ ಗುಳ್ಳಾಪುರ ಉತ್ಸವ ಹಾಗೂ (ಆಲೆಮನೆ ಹಬ್ಬ) ಸಾಂಸ್ಕೃತಿಕ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮವನ್ನು ಫೆಬ್ರವರಿ 23 ರಂದು ಆಯೋಜಿಸಲಾಗಿದೆ. ಜೊತೆಗೆ ಸ್ಥಳದಲ್ಲೇ ಕಬ್ಬಿನ ಹಾಲಿನಿಂದ ತಯಾರಿಸುವ ಆಹಾರ ಹಾಗೂ ಸಿಹಿ ತಿಂಡಿಗಳ ತಯಾರಿಕಾ ಪ್ರಾತ್ಯಕ್ಷಿಕೆ ಇರುತ್ತದೆ. ವಿವಿಧ ಮಳಿಗೆಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ಬುರ್ಡೆಕರ್ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಾದ ಲಕ್ಷ್ಮೀಪ್ರಿಯಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಉಪನ್ಯಾಸ, ವಿಚಾರಗೋಷ್ಠಿ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ ಸ್ವರ ಝೇಂಕಾರ, ಕೀರ್ತನೆ, ಸ್ಥಳೀಯ ಕಲಾವಿದರು ಹಾಗೂ ಸೀತಾರಾಮ ಸಂಜೀವಿನಿ ಗ್ರಾ.ಪಂ ಒಕ್ಕೂಟ ಮಹಿಳೆಯರಿಂದ ಕಾರ್ಯಕ್ರಮ, ಜನಪದ ನೃತ್ಯ, ಭರತನಾಟ್ಯ-ಗಾಯನ, ಹಾಗೂ ಯಕ್ಷ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್, ಶಾಂತರಾಮ ಸಿದ್ದಿ ಹಾಗೂ ಸುತ್ತಮುತ್ತಲಿನ ಗ್ರಾ.ಪಂ ನ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಬಳಿಕ ಜೀ ಕನ್ನಡ ಸರಿಗಮಪ ಖ್ಯಾತಿಯ ಕಲಾವಿದರಿಂದ ಸಂಗೀತ ಸಂಜೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಗುಳ್ಳಾಪುರ ಉತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀಕಾಂತ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .