ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ತಳ್ಳುವ ಪ್ರಯತ್ನ | ಜನತೆಯಲ್ಲಿ ಶಾಸಕ ಭೀಮಣ್ಣ ಕ್ಷಮೆ ಕೇಳಲು ಆಗ್ರಹ
ಶಿರಸಿ: ಶಿರಸಿ ಪಂಡಿತ್ ಸಾರ್ವಜನಿಕ ಆಸ್ಫತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ 30 ಕೋಟಿ ರೂಪಾಯಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸ್ಪೆಷಾಲಿಟಿ ಆಸ್ಪತ್ರೆಯನ್ನ ಕೆಳದರ್ಜೆಗೆ ತಳ್ಳುವ ಪ್ರಯತ್ನ ಮಾಡುತ್ತಿರುವ ಮಾನ್ಯ ಶಾಸಕರಾದ ಭೀಮಣ್ಣ ಅವರು ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.
ಅವರು ಶಿರಸಿಯ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಹಾಲಿ ಶಾಸಕರ ಆಪ್ತರು ಇತ್ತಿಚಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಶಿರಸಿಯದು ಸ್ಪೆಷಾಲಿಟಿ ಆಸ್ಪತ್ರೆಯಲ್ಲ, ಕೇವಲ ಮೇಲ್ದರ್ಜೆಗೇರಿಸಿದ ಆಸ್ಪತ್ರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಎಲ್ಲ ಸೌಲಭ್ಯವನ್ನು ಮಾಜಿ ಸಭಾಧ್ಯಕ್ಷರಾದ ಕಾಗೇರಿಯವರು ಮಂಜೂರಿ ಮಾಡಿಸಿಕೊಂಡು ಬಂದಿದ್ದರು. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದುಕೊಂಡು ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಮೀಸಲಿರಿಸಿದ್ದ 30 ಕೋಟಿ ರೂಪಾಯಿ ಕೊಡುವುದಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯನ್ನು ಕೆಳದರ್ಜೆಗೆ ಇಳಿಸುವ ಶಾಸಕರ ಪ್ರಯತ್ನ ಜನತೆಗೆ ಮಾಡುವ ದ್ರೋಹವಾಗಿದೆ. ಸ್ಪೆಷಾಲಿಟಿ ಆಸ್ಪತ್ರೆಗಿರುವ ಸೌಲಭ್ಯವನ್ನು ನಿರಾಕರಿಸಿ ಕೆಳದರ್ಜೆಯ ಆಸ್ಪತ್ರೆಯನ್ನಾಗಿಸುವುದು ಎಂದಿಗೂ ಸರಿಯಲ್ಲ. ಹೊಸ ವೈದ್ಯಾಧಿಕಾರಿಗಳನ್ನ ನೇಮಿಸಿಕೊಂಡು ಸಲಕರಣೆಗಾಗಿ 30 ಕೋಟಿ ಬದಲಿಗೆ 5.20 ಕೋಟಿ ಪ್ರಸ್ತಾವನೆ ಕಳಿಸಿದ್ದೀರಿ. ನಂತರ ನಿಮ್ಮಲ್ಲಿ ನೇರವಾಗಿ ಕೇಳಿದಾಗ 18.5 ಕೋಟಿ ಸಲಕರಣೆ ಬಂದಿದೆ ಎಂಬುದಾಗಿ ಮಾಧ್ಯಮಕ್ಕೆ ಹೇಳಿದ್ದೀರಿ. ಇದನ್ನು ಪ್ರಶ್ನೆ ಮಾಡಿದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲು ನಿಮ್ಮ ಆಪ್ತರಿಗೆ ಕರೆ ಕೊಡುತ್ತೀರಿ ಶಾಸಕ ಭೀಮಣ್ಣನವರಿಗೆ ಆಸ್ಪತ್ರೆಯನ್ನು ಮಾಡಬೇಕೆನ್ನುವ ಮನಸ್ಥಿತಿ ಇದ್ದಂತೆ ಕಾಣುವುದಿಲ್ಲ. ಅಭಿವೃದ್ಧಿಯ ವಿಚಾರ ಇರುವುದು ನಿಜವಾದರೆ, ಈ ರೀತಿ ಲೂಸ್ ಟಾಕ್ ಮಾಡುವ ಕೆಲಸ ಮಾಡುತ್ತಿರಲಿಲ್ಲ. ಪ್ರಶ್ನೆ ಮಾಡಿದವರ ಧ್ವನಿ ಹತ್ತಿಕ್ಕುವ ಅವರ ನಡೆಯನ್ನು ನಾವು ಖಂಡಿಸುತ್ತೇವೆ. ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೆಳದರ್ಜೆಗೆ ಇಳಿಸುವ ಶಾಸಕರ ಪ್ರಯತ್ನ ಘೋರತಪ್ಪು.
ಒಮ್ಮೆ ಕಾಮಗಾರಿಗೆ ಟೆಂಡರ್ ಆದಮೇಲೆ ಗುತ್ತಿಗೆದಾರರಿಗೆ ಬಿಲ್ ಪ್ರಕಾರ ಹಣ ಸಂಬಂಧಪಟ್ಟ ಇಲಾಖೆಯಿಂದ ಬಿಡುಗಡೆ ಆಗುತ್ತದೆ. ಆಸ್ಪತ್ರೆಯ ಕೇವಲ ಕಟ್ಟಡ ಕಾಮಗಾರಿಗಾಗಿ ನೀವು ತಂದಿದ್ದೀರಿ ಎಂದಿರುವ 44 ಕೋಟಿ ರೂಪಾಯಿಗೆ ಮತ್ತು ಶಾಸಕರಿಗೆ ಯಾವುದೇ ಸಂಬಂಧ ಇರುವುದಿಲ್ಲ. ಯಾಕೆಂದರೆ ಅದು ಈಗಾಗಲೇ ಮಂಜೂರಾಗಿರುವ ಹಣವಾಗಿದೆ. ಯಾರೇ ಶಾಸಕರಿದ್ದರೂ, ರಾಷ್ಟ್ರಪತಿ ಆಡಳಿತ ಇದ್ದರೂ ಮಂಜೂರಾದ ಹಣ ಗುತ್ತಿಗೆದಾರರಿಗೆ ಬರುತ್ತದೆ. ಅದರಲ್ಲಿ ಶಾಸಕರ ವಿಶೇಷ ಪಾತ್ರ ಇರುವುದಿಲ್ಲ. ನಾನು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ ಎಲ್ಲ ದಾಖಲೆಗಳು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದುಕೊಂಡಿದ್ದೇನೆ. ಇದ್ಯಾವುದೂ ನನ್ನ ಮನೆಯ ದಾಖಲೆಗಳಲ್ಲ. ಶಿರಸಿಯ ಆಸ್ಪತ್ರೆ ಸ್ಪೆಷಾಲಿಟಿ ಆಸ್ಪತ್ರೆಯೆಂದು ದಾಖಲೆಗಳೇ ಹೇಳುತ್ತಿವೆ. ಆಸ್ಪತ್ರೆ ಕುರಿತಾಗಿ ಶಾಸಕರು ಇದುವರೆಗೆ ತುಟಿ ಬಿಚ್ಚದೇ ಮೌನವಾಗಿರುವುದು ಸರಿಯಲ್ಲ. ಇದಕ್ಕೆ ತಕ್ಷಣ ಭೀಮಣ್ಣ ನಾಯ್ಕ ಉತ್ತರ ನೀಡಬೇಕೆಂದು ಅವರು ಹೇಳಿದರು.
ಆಸ್ಪತ್ರೆ ಕುರಿತಾಗಿ ಪ್ರಶ್ನೆ ಮಾಡಿದವರ ಮೇಲೆ ನಾನ್ ಬೇಲೆಬಲ್ ಕೇಸ್ ದಾಖಲಿಸುತ್ತಾರೆ. ಬೆಂಬಲಿಗರಿಂದ ಪ್ರತಿಕೃತಿ ದಹನ ಮಾಡಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅಸಂಬದ್ಧ ಕಮೆಂಟ್ ಮಾಡಿಸುತ್ತಾರೆ. ಜಾತಿ ರಾಜಕೀಯವನ್ನು ಹಬ್ಬಿಸುತ್ತಾರೆ. ಪೋಲೀಸ್ ಠಾಣೆಯಲ್ಲಿ ದೂರು ಕೊಡುವವರೇ ನನ್ನ ಮೇಲೆ ನಾನ್ ಬೇಲೆಬಲ್ ಪ್ರಕರಣ ದಾಖಲಿಸುವಂತೆ ಸೆಕ್ಷನ್ ಬರೆದುಕೊಡುತ್ತಾರೆ. ಅದರಂತೆ ನಡೆಯಲು ಪೋಲೀಸರಿಗೆ ಸೂಚನೆ ಕೊಡಲಾಗುತ್ತದೆ ಎಂದರೆ ನಾವು ಯಾವ ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಇದೇನು, ರಿಪಬ್ಲಿಕ್ ಆಫ್ ಶಿರಸಿನಾ ? ಶಾಸಕರನ್ನು ಪ್ರಶ್ನಿಸುವುದು ಅಪರಾಧವಾಗುತ್ತದೆಯಾ ? ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಜೊತೆಗೆ ಮಾನನಷ್ಟ ಮೊಕದ್ದಮೆ ದಾಖಲಿಸುವ ಕಾರಣ ಕೇಳಿ, ಲೀಗಲ್ ನೋಟೀಸ್ ಸಹ ನೀಡಿದ್ದೀರಿ. ದಯಮಾಡಿ ವಯಕ್ತಿಕ ದ್ವೇಷ ರಾಜಕಾರಣ ಮಾಡಬೇಡಿ. ನಮಗೂ ಕುಟುಂಬವಿದೆ. ಸಣ್ಣ ಮಕ್ಕಳು, ವಯಸ್ಸಾದ ತಂದೆ-ತಾಯಿಗಳಿದ್ದಾರೆ. ಆಸ್ಪತ್ರೆ ಹೋರಾಟ ಮಾಡುವ ಬದಲು ಕೋರ್ಟು, ವಕೀಲರ ಆಫೀಸು, ಪೋಲೀಸ್ ಸ್ಟೇಷನ್ ಗಳನ್ನು ಅಲೆಯಬೇಕೆಂಬುದು ನಿಮ್ಮ ಉದ್ದೇಶವಾದಂತೆ ಕಾಣುತ್ತದೆ ಎಂದರು.
ಶಾಸಕರು ಮೊದಲಿಗೆ ಕ್ಷೇತ್ರದ ಅಭಿವೃದ್ಧಿ ಕುರಿತಾಗಿ ಗಮನ ನೀಡಬೇಕು. ಶಿರಸಿ ಬಸ್ ಸ್ಟಾಂಡ್ ತಕ್ಷಣ ಉದ್ಘಾಟನೆ ಆಗಬೇಕಿದೆ. ಇಂದಿರಾ ಕ್ಯಾಂಟೀನ್ ತಕ್ಷಣ ಉದ್ಘಾಟನೆ ಆಗಿ ಬಡವರಿಗೆ ಕಡಿಮೆ ದರದಲ್ಲಿ ಊಟ ದೊರೆಯಬೇಕು. ಆಯುಷ್ಮಾನ್ ರೆಫರೆಲ್ ಲೆಟರ್ ಶಿರಸಿಯಲ್ಲೇ ಸಿಗುವಂತಾಗಬೇಕು. ಈಗ ಇರುವ ಆಸ್ಪತ್ರೆಗೆ ಜನರಲ್ ಫಿಜಿಶಿಯನ್ ನೇಮಕ ಆಗಬೇಕು. ಈಗಾಗಲೆ 80% ಕೆಲಸ ಆಗಿರುವ ಆಸ್ಪತ್ರೆಗೆ ಸಲಕರಣೆಗೆ ಟೆಂಡರ್ ಕರೆದು, ವೈದ್ಯರ ನೇಮಕಾತಿ ಆಗಬೇಕು,
ಶಿರಸಿ ಆಸ್ಪತ್ರೆಗೆ ಎಲ್ಲಾ ಸಾಮಗ್ರಿಗಳು ಬಂದು ಈ ಮೇಲಿನ ಎಲ್ಲಾ ಸೌಲಭ್ಯಗಳು ಬರಲೇಬೇಕು. ಇನ್ನೂ 15 ದಿನ ಕಾಯುತ್ತೇವರ. ಶಾಸಕರಿಂದ ಏನೂ ಪ್ರತಿಕ್ರಿಯೆ ಬಂದಿಲ್ಲ ಎಂದರೆ ಆಸ್ಪತ್ರೆ ಉಳಿಸಿ, ಎಂದು ಬೀದಿಯಲ್ಲಿ ಸಹಿ ಸಂಗ್ರಹಣೆ ಕಾರ್ಯಕ್ರಮ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಮಾತನಾಡಿ, ಸಾರ್ವಜನಿಕ ವಿಚಾರವನ್ನು ಕೇಳುವುದು ಪ್ರತಿಯೊಬ್ಬನ ಹಕ್ಕು. ಶಾಸಕರು ಅವರ ಸಲಹೆಗಾರರನ್ನು ಮಾರ್ಪಡಿಸಿಕೊಳ್ಳುವ ಅವಶ್ಯಕತೆ ಇದ್ದಂತೆ ಕಾಣುತ್ತದೆ. ನಾವು ಯಾರೂ ಶಾಸಕರ ವಿರೋಧಿಗಳಲ್ಲ. ಅಭಿವೃದ್ಧಿ ಪರವಾಗಿ ಮಾತನಾಡುತ್ತಿದ್ದೇವೆ. ಪ್ರಶ್ನೆ ಮಾಡಿದವರ ಪ್ರತಿಕೃತಿ ದಹಿಸುವುದು ಸರಿಯಲ್ಲ. ಇದಕ್ಕೆ ಶಾಸಕರು ಪ್ರೋತ್ಸಾಹ ನೀಡಬಾರದು ಎಂದರು.
ಸಿದ್ದಾಪುರ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಕೆ. ತಿಮ್ಮಪ್ಪ ಮಾತನಾಡಿ, ಈ ಹಿಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದಿಂದ ಶಿರಸಿಗೆ ಈ ಸ್ಪೆಷಾಲಿಟಿ ಆಸ್ಪತ್ರೆ ಬಂದಿದೆ. ಬಾಯಿ ತೆಗೆದರೆ ಸಂವಿಧಾನ ಎಂದು ಹೇಳುವ ಕಾಂಗ್ರೆಸಿಗರು, ಸಂವಿಧಾನದ ಅಡಿಯಲ್ಲಿಯೇ ಅನಂತಮೂರ್ತಿ ಹೆಗಡೆ ಅವರು ಆಸ್ಪತ್ರೆಗಾಗಿ ಹೋರಾಟ ಮಾಡಿದರೆ ಅವರ ಮೇಲೆ ಕೇಸ್ ಹಾಕುತ್ತಾರೆ. ಬಡವರ ಪರವಾಗಿ ಹೋರಾಟ ಮಾಡಿದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡುವ ಕಾಂಗ್ರೆಸ್ ಸರಕಾರ ಮತ್ತು ಶಾಸಕರ ನಡೆ ಸರಿಯಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಶಿರಸಿ ತಾಲೂಕು ಅಧ್ಯಕ್ಷೆ ಉಷಾ ಹೆಗಡೆ, ರಂಗಪ್ಪ ದಾಸನಕೊಪ್ಪ ಇದ್ದರು.
ನನ್ನ ಮೇಲೆ ಪ್ರಕರಣ ದಾಖಲಿಸುವ ಬದಲು ಪ್ರಶ್ನೆಗೆ ಉತ್ತರ ಹೇಳಿದರೆ ಶಾಸಕರ ಜನಪ್ರಿಯತೆ, ಆ ಸ್ಥಾನಕ್ಕೆ ಗೌರವವಿರುತ್ತಿತ್ತು. ಬದಲಾಗಿ ಪ್ರಶ್ನಿಸಿದವರ ಮೇಲೆ ಕೇಸ್ ದಾಖಲು ಮಾಡುವುದು, ಅವರನ್ನು ಹತ್ತಿಕ್ಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನತೆಯೇ ತೀರ್ಮಾನಿಸುತ್ತಾರೆ.
ಶಿರಸಿಯದು ಕೇವಲ ಮೇಲ್ದರ್ಜೆಗೇರಿಸಿದ ಆಸ್ಪತ್ರೆಯಲ್ಲ, ಬದಲಾಗಿ ಸ್ಪೆಷಾಲಿಟಿ ಆಸ್ಪತ್ರೆ:
ಶಿರಸಿಯದು ಕೇವಲ ಮೇಲ್ದರ್ಜೆಗೇರಿಸಿದ ಆಸ್ಪತ್ರೆಯಲ್ಲ, ಬದಲಾಗಿ ಸ್ಪೆಷಾಲಿಟಿ ಆಸ್ಪತ್ರೆ ಆಗಿರುವ ಕಾರಣಕ್ಕೇ ಇದರಲ್ಲಿ ಹೃದಯ ಚಿಕಿತ್ಸೆಗೆ ಸಂಬಂಧಿಸಿ ಕ್ಯಾಥ್ ಲ್ಯಾಬ್, ಕಾರ್ಡಿಯಾಲಜಿ ಇದೆ. ನೆಫ್ರೊಲೊಜಿ, ಯುರೊಲೊಜಿ, ನ್ಯುರೋಲಜಿ, ಟ್ರಾಮಾ ಸೆಂಟರ್ ಮಾಡುವ ಆವಕಾಶ ಇದೆ, ಎಂಆರ್ಐ ಮಷಿನ್ ಮತ್ತು ಸಿಟಿ ಸ್ಕ್ಯಾನ್ ಮಷಿನ್ ಒಳಗೊಂಡು ಇನ್ನೂ ಹಲವಾರು ಸ್ಪೆಶಾಲಿಟಿ ಸೌಲಭ್ಯಗಳು ಇದೆ. ನಾರ್ಮಲ್ ಆಸ್ಪತ್ರೆಯಲ್ಲಿ ಇವೆಲ್ಲ ಇರತ್ತಾ? 250 ಬೆಡ್, 142 ಕೋಟಿ ಬಜೆಟ್ ಇರುತ್ತಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ. ಇಷ್ಟೆಲ್ಲ ಸೌಕರ್ಯಗಳನ್ನು ಒಳಗೊಂಡಿರುವ ಆಸ್ಪತ್ರೆ ಸ್ಪೆಷಾಲಿಟಿ ಆಸ್ಪತ್ರೆಯಲ್ಲವೆಂದು ಕೆಳದರ್ಜೆಗೆ ತಳ್ಳುವುದು ಸರಿಯಲ್ಲ. ಬಡವರ ಭಾಗ್ಯವನ್ನು ಶಾಸಕರು ಕಸಿಯಬಾರದು.