ದಾಂಡೇಲಿ : ನಗರದ ಟಿಂಬರ್ ಡಿಪೋದಲ್ಲಿ ಫೆ.21, 24 ಮತ್ತು 25ರಂದು ವಿವಿಧ ಜಾತಿಯ ಮರಮುಟ್ಟುಗಳ ಇ ಹರಾಜು ನಡೆಯಲಿದೆ ಎಂದು ಟಿಂಬರ್ ಡಿಪೋ ಇದರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚೌವ್ಹಾಣ್ ತಿಳಿಸಿದ್ದಾರೆ.
ಅವರು ಬುಧವಾರ ನಗರದ ಟಿಂಬರ್ ಡಿಪೋ ಕಾರ್ಯಾಲಯದಲ್ಲಿ ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದರು. ಟಿಂಬರ್ ಡಿಪೋದಲ್ಲಿ ಉತ್ಕೃಷ್ಟ ಗುಣಮಟ್ಟದ ಸಾಗುವಾನಿ, ಸಿಸಂ, ಹೊನ್ನೆ, ಮತ್ತಿ ಇತ್ಯಾದಿ ಜಾತಿಯ ಮರಗಳ ಇ -ಹರಾಜು ನಡೆಯಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಹರಾಜಿನಲ್ಲಿ 1,481 ಲಾಟ್ ಗಳು, 2,300 ಘನ ಮೀ. ನಷ್ಟು ಮರದ ನಾಟಾಗಳು ಲಭ್ಯವಿರುತ್ತದೆ. ಹರಾಜಿನಲ್ಲಿ ತೇಗ ಮತ್ತು ಸೀಸಂ ಪ್ರಾಥಮಿಕ ಕೊಡುಗೆಗಳಾಗಿದ್ದರೆ, ನಂದಿ, ಮತ್ತಿ, ಜಂಬೆ, ಹೊನ್ನೆ, ಕಿಂಡಾಲ್, ಕರಿಮುತ್ತಲ್, ಕಲಾಂ, ಹೆಡ್ಡಿ, ಆಕೇಶಿಯಾ ಹೀಗೆ ವಿವಿಧ ಮರದ ಜಾತಿಗಳನ್ನು ಒಳಗೊಂಡಿರುತ್ತದೆ. ಮನೆ ನಿರ್ಮಾಣ ಪೀಠೋಪಕರಣ ತಯಾರಿಕೆ ಮತ್ತು ಇತರ ಕೈಗಾರಿಕಾ ಬಳಕೆಗಳಲ್ಲಿ ಗುಣಮಟ್ಟ ಮತ್ತು ಉಪಯುಕ್ತತೆಗೆ ಹೆಸರುವಾಸಿಯಾಗಿರುವ ದಾಂಡೇಲಿಯ ಮರದ ನಾಟಾಗಳನ್ನು ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ.
ಈ ಹರಾಜಿನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಂತೋಷ್ ಚೌಹ್ವಾಣ್ ಅವರು ವಿನಂತಿಸಿದ್ದಾರೆ.