ಹೊನ್ನಾವರ : ಇಲ್ಲಿಯ ಜಾನಪದ ವಿಶ್ವ ಪ್ರತಿಷ್ಠಾನ ಹಾಗೂ ಎಸ್.ಡಿ.ಎಂ. ಪದವಿ ಕಲೇಜಿನ ಜಂಟಿ ಆಶ್ರಯದಲ್ಲಿ ಜನಪದ ದೀಪಾರಾಧನೆ, ಪ್ರಶಸ್ತಿ ಪ್ರದಾನ, ಸಾಕ್ಷ್ಯಚಿತ್ರ, ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ ಮಾರ್ಚ್ ೪ರಂದು ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಎಸ್.ಡಿ.ಎಂ. ಕಾಲೇಜಿನ ಸಭಾಭವನದಲ್ಲಿ ನಡೆಯಲಿದೆ ಎಂದು ಜಾನಪದ ವಿದ್ವಾಂಸ ಡಾ. ಎನ್.ಆರ್.ನಾಯಕ ತಿಳಿಸಿದರು.
ಪಟ್ಟಣದಲ್ಲಿ ಸ್ವಗೃಹದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಾನಪದ ವಿಶ್ವ ಪ್ರತಿಷ್ಠಾನದ ಮೂಲಕ ೪೫ ವರ್ಷಗಳಿಂದ ಜಾನಪದ ದೀಪಾರಾಧನೆಯನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗಿದೆ. ಡಾ.ಶಿವರಾಮ ಕಾರಂತರು ಪ್ರಥಮ ಜಾನಪದ ದೀಪಾರಾಧನೆಗೆ ಚಾಲನೆ ನೀಡಿದ ನಂತರ ಈವರೆಗೆ ಎಲ್ಲಿಯೂ ಕಾರ್ಯಕ್ರಮವನ್ನು ನಿಲ್ಲಿಸಿಲ್ಲ ಎಂದು ತಿಳಿಸಿದರು. ಹಳ್ಳಿಗಳಲ್ಲಿ ಕಾರ್ತಿಕೋತ್ಸವದಲ್ಲಿ ದೀಪಬೆಳಗುತ್ತಾರೆ. ಆ ದೀಪದ ಬೆಳಕಿನ ಸಾಲು ಮಾಯಾಲೋಕದ ಸಂತೋಷ ಕೊಡುತ್ತಿತ್ತು. ಜಾನಪದ ದೀಪಾರಾಧನೆ ಕಾರ್ಯಕ್ರಮಕ್ಕೆ ಅದು ಪ್ರೇರಣೆ ನೀಡಿತು ಎಂದರು.
ಡಾ. ಶಾಂತಿ ನಾಯಕ ಮಾತನಾಡಿ ಕನ್ನಡ ಜಾನಪದ ಸಮೃದ್ದ ಭಾಷೆ. ಜಾನಪದದ ಮಹತ್ವವನ್ನು ಜಗತ್ತಿಗೆ ತೋರಿದ ಬಾಷೆ ಎಂದರು.
ಡಾ. ಸವಿತಾ ಉದಯ ಮಾತನಾಡಿ ದೇಶ ವಿದೇಶಗಳಿಂದ ಆಸಕ್ತ ವಿದ್ಯಾರ್ಥಿಗಳು ಜಾನಪದವನ್ನು ಅರಿಯಲು ಇಲ್ಲಿಗೆ ಬರುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ. ಎನ್.ಆರ್.ನಾಯಕ ಭತ್ತದ ಕಣಜ ಕಟ್ಟುವರು. ಪರಿಸರ ತಜ್ಞ ಶಿವಾನಂದ ಕಳವೆ ಕಾರ್ಯಕ್ರಮ ಉದ್ಘಾಟಿಸುವರು. ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಅಧ್ಯಕ್ಷತೆ ವಹಿಸುವರು. ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಎಲ್.ಹೆಬ್ಬಾರ ಉಪಸ್ಥಿತರಿರುವರು.
ಡಾ.ಎನ್.ಆರ್.ನಾಯಕ ಹಾಗೂ ಡಾ.ಶಾಂತಿ ನಾಯಕ ದಂಪತಿ ಪ್ರಶಸ್ತಿ ಪ್ರಧಾನ ಮಾಡುವರು. ಸಾಹಿತ್ಯ, ರಂಗಭೂಮಿ ಕ್ಷೇತ್ರದಲ್ಲಿ ಡಾ.ಶ್ರೀಪಾದ ಭಟ್, ಶಿಕ್ಷಣ, ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಕೃಷ್ಣಮೂರ್ತಿ ಭಟ್ ಶಿವಾನಿ ಇವರಿಗೆ ಕುವೆಂಪು ದೀಪ ಪ್ರಶಸ್ತಿ, ಪರಿಸರ ಕ್ಷೇತ್ರದಲ್ಲಿ ಶಿವಾನಂದ ಕಳವೆ, ರಂಗಭೂಮಿ ಕ್ಷೇತ್ರದಲ್ಲಿ ಶರಣ್ಯ ರಾಮ್‌ಪ್ರಕಾಶ ಇವರಿಗೆ ಕಾರಂತ ದೀಪ ಪ್ರಶಸ್ತಿ, ಬುಟ್ಟಿಹೆಣೆಯುವಿಕೆ ಕಲೆಯ ಯಶೋಧಾ ಮರಾಠಿ, ಯುವ ಕೃಷಿಕ ಕಾರ್ತಿಕ ನಾಯಕ ಇವರಿಗೆ ದೇವಮ್ಮ ನಾಯಕ ಪ್ರಶಸ್ತಿ, ಕರಾಟೆ ವಿದ್ಯಾರ್ಥಿ ಋತ್ವಿಕ್ ಮೇಸ್ತ ಇವರಿಗೆ ವಿದ್ಯಾರ್ಥಿ ದೀಪ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ನಾಗರಾಜ ಹೆಗಡೆ ಅಪಗಾಲ ಅಭಿನಂದನಾ ನುಡಿಗಳನ್ನಾಡುವರು. ಶರಣ್ಯ ರಾಮ್‌ಪ್ರಕಾಶ ನಿರ್ಮಾಣದ ಡಾ.ಎನ್.ಆರ್.ನಾಯಕ ದಂಪತಿಗಳ ಕ್ಷೇತ್ರಕಾರ್ಯದ ಸಾಕ್ಷ್ಯ ಚಿತ್ರ ಬಿಡುಗಡೆ, ಶ್ರೀಜಾ ಕೇರಳ ಮತ್ತು ಸಂಗಡಿಗರಿಂದ ಗೀತಗಳ ಗಾಯನ, ಕೋಮಾರಪಂತರ ಜಾನಪದ ಪುಸ್ತಕ ಬಿಡುಗಡೆ ನಡೆಯಲಿದೆ. ಶ್ರೀಧರ ನಾಯಕ ಕೃತಿಪರಿಚಯ ಮಾಡುವರು ಎಂದು ಡಾ. ಸವಿತಾ ಉದಯ ತಿಳಿಸಿದರು.